Sunday, September 23 , 2018 12:10 AMನೀತಿ ಸಂಹಿತೆ ಹಿನ್ನಲೆ : ಜಿಲ್ಲೆಯಾದ್ಯಂತ ಭಾರೀ ಖಾಕಿ ಕಟ್ಟೆಚ್ಚರ, ತೀವ್ರಗೊಂಡ ವಾಹನ ತಪಾಸಣೆ1879

ಮಂಗಳೂರು : ರಾಜ್ಯ ವಿಧಾನ ಸಭೆಯ ಚುನಾವಣೆ ನೀತಿ ಸಂಹಿತಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸರು ಭಾರೀ ಕಟ್ಟೆಚ್ಚರವಹಿಸಿದ್ದು, ವಾಹನ ತಪಾಸಣೆ ತೀವ್ರಗೊಳಿಸಲಾಗಿದ್ದು, ರಾಜಕೀಯ ಕಾರ್ಯಕ್ರಮಗಳ ಮೇಲೆ ಕಣ್ಣಿಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಸಸಿಕಾಂತ್ ಸೆಂಥಿಲ್ ಅವರ ಸೂಚನೆಯಂತೆ ಈಗಾಗಲೇ ವಿವಿಧ ಕಡೆಗಳಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ.

ವಿವಿಧ ಭಾಗ್ಯ ಯೋಜನೆಗಳ ಮೂಲಕ ಸರಕಾರದ ಪರ ಪ್ರಚಾರಕ್ಕಾಗಿ ಹಾಕಲಾಗಿದ್ದ ಫಲಕಗಳು, ರಾಜಕೀಯ ಪಕ್ಷಗಳ ವಿವಿಧ ಯಾತ್ರೆ, ಸಮಾವೇಶಕ್ಕಾಗಿ ಹಾಕಿದ್ದ ಫ್ಲೆಕ್ಸ್, ಬ್ಯಾನರ್, ಬಾವುಟಗಳನ್ನು ಹುಡುಕಿ ತೆಗೆಯಲಾಗಿದೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಚಿವರ ಭಾವಚಿತ್ರ ಒಳಗೊಂಡ ಸಾಧನೆಗಳ ಬೋರ್ಡ್‌ಗಳು ಹಾಗೂ ಪ್ರಚಾರ ಫಲಕಗಳನ್ನು ತೆರವುಗೊಳಿಸಲಾಗಿದೆ.

ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಗಳ ತಂಡ ರಚಿಸಲಾಗಿದೆ. ಜಿಲ್ಲೆಯಲ್ಲಿನ ಎಲ್ಲ ಸರಕಾರಿ ವಸತಿಗೃಹಗಳನ್ನು ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕ್ರಮಕ್ಕೆ ಹಾಗೂ ಖಾಸಗಿ ವ್ಯಕ್ತಿಗಳ ಬಳಕೆಗೆ ನೀಡದಂತೆ ಸೂಚಿಸಲಾಗಿದೆ. ಅಲ್ಲದೇ, ವಿವಿಧೆಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ಮೇಲೂ ಕಣ್ಣಿಡಲಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕ್ರಮ, ಪ್ರಚಾರ ಸಭೆಗಳನ್ನು ಗಮನಿಸಲಾಗುತ್ತಿದೆ. ರಾಜಕೀಯ ಪಕ್ಷಗಳ ಭರವಸೆ ನೀಡುವುದು ಕಂಡು ಬಂದಲ್ಲಿ ತಕ್ಷಣ ಕ್ರಮತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಮಾತ್ರವಲ್ಲದೇ ಚುನಾವಣಾ ನೀತಿಸಂಹಿತೆ ಜಾರಿಯಾಗಿರುವುದರಿಂದ ೫೦,೦೦೦ಕ್ಕಿಂತ ಹೆಚ್ಚಿನ ನಗದು ಸಾಗಿಸುವಾಗ ದಾಖಲೆ ಹೊಂದಿರುವುದು ಕಡ್ಡಾಯ. ದಾಖಲೆ ಇಲ್ಲದ ನಗದನ್ನು ವಶಕ್ಕೆ ಪಡೆಯಲಾಗುವುದು ಹಾಗೂ ದಾಖಲೆ ಸಹಿತವಾಗಿ ೧೦ ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ಸಾಗಿಸುತ್ತಿರುವುದು ಪತ್ತೆಯಾದರೂ ಅಂತಹ ಪ್ರಕರಣಗಳ ತನಿಖೆಯನ್ನು ಆದಾಯ ತೆರಿಗೆ ಇಲಾಖೆಯ ಸುಪರ್ದಿಗೆ ವಹಿಸಲಾಗುವುದು.

ಅನುಮಾನಾಸ್ಪದವಾಗಿ ನಗದು ವಶಪಡಿಸಿಕೊಂಡ ಪ್ರಕರಣಗಳಲ್ಲಿ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಿ, ತುರ್ತಾಗಿ ತೀರ್ಮಾನ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ೧೦,೦೦೦ಕ್ಕಿಂತ ಹೆಚ್ಚಿನ ಮೌಲ್ಯದ ಮದ್ಯ ಮತ್ತು ಉಡುಗೊರೆ ಸಾಮಾಗ್ರಿಗಳನ್ನು ಸಾಗಿಸಲು ಅವಕಾಶವಿಲ್ಲ. ಅಂತಹ ಪ್ರಕರಣಗಳು ಪತ್ತೆಯಾದರೆ ಅವುಗಳನ್ನು ವಶಕ್ಕೆ ಪಡೆಯಲಾಗುವುದು. ಚುನಾವಣಾ ಮಾದರಿ ನೀತಿ ಸಂಹಿತೆಯು ಮೇ ೧೮ರವರೆಗೆ ಜಾರಿಯಲ್ಲಿ ಇರಲಿದೆ.

ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ರಾಜಕೀಯೇತರ ಕಾರ್ಯಕ್ರಮ ಆಯೋಜಿಸಬೇಕಾದರೆ ಕ್ಷೇತ್ರ ಚುನಾವಣಾಧಿಕಾರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ನೀತಿಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಅಕ್ರಮ ತಡೆಗೆ ಜಿಲ್ಲಾಡಳಿತದಿಂದ ತನಿಖಾ ಠಾಣೆಗಳನ್ನು ಸ್ಥಾಪಿಸಿದ್ದು, ಜಿಲ್ಲೆಯನ್ನು ಪ್ರವೇಶಿಸುವ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ತಲಪಾಡಿ, ಕೊಣಾಜೆ ಸೇರಿದಂತೆ ಆರು ಕಡೆಗಳಲ್ಲಿ ತನಿಖಾ ಠಾಣೆ ಸ್ಥಾಪಿಸಲಾಗಿದೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸುಳ್ಯ, ಅಡ್ಯನಡ್ಕ, ವಿಟ್ಲ, ಪುತ್ತೂರು ಸೇರಿದಂತೆ ಒಂಬತ್ತು ಕಡೆಗಳಲ್ಲಿ ತನಿಖಾ ಠಾಣೆಗಳು ಕಾರ್ಯಾರಂಭ ಮಾಡಿವೆ. ಇನ್ನೂ ೧೧ ಸ್ಥಳಗಳಲ್ಲಿ ತನಿಖಾ ಠಾಣೆಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಚುನಾವಣೆಯಲ್ಲಿ ಬಳಸುವುದಕ್ಕಾಗಿ ಹಣ, ಮದ್ಯ, ಬಟ್ಟೆ, ಪಾತ್ರೆ, ಚಿನ್ನಾಭರಣದಂತಹ ವಸ್ತುಗಳನ್ನು ಸಾಗಿಸುವುದನ್ನು ಪತ್ತೆಹಚ್ಚಲು ತನಿಖಾ ಠಾಣೆಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.

ಹೊರ ರಾಜ್ಯಗಳಿಂದ ಜಿಲ್ಲೆ ಪ್ರವೇಶಿಸುವ ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ಒಳಭಾಗದಲ್ಲೂ ಕೆಲವೆಡೆ ವಾಹನಗಳ ತೀವ್ರ ತಪಾಸಣೆಗೆ ಹಾಗೂ ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಹೆಚ್ಚಿನ ನಿಗಾ ಇರಿಸುವಂತೆ ಸೂಚಿಸಿದ್ದಾರೆ. ಎಲ್ಲ ತನಿಖಾ ಠಾಣೆಗಳಲ್ಲಿ ಆಂಬುಲೆನ್ಸ್‌ಗಳನ್ನೂ ತಪಾಸಣೆ ಮಾಡಲಾಗುತ್ತಿದೆ. ಚುನಾವಣೆಯ ಸಮಯದಲ್ಲಿ ಹಣ, ಮದ್ಯ ಸಾಗಣೆಗೆ ಆಂಬುಲೆನ್ಸ್‌ಗಳನ್ನು ಬಳಸಲಾಗುತ್ತಿದೆ ಎಂಬ ಆರೋಪ ಹಿಂದೆ ಹಲವು ಬಾರಿ ಕೇಳಿಬಂದಿತ್ತು. ಆದ್ದರಿಂದ ಈ ಬಾರಿ ಆಂಬುಲೆನ್ಸ್‌ಗಳನ್ನೂ ತಪಾಸಣೆಯ ವ್ಯಾಪ್ತಿಗೆ ತರುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

 

error: Content is protected !!