Thursday, August 16 , 2018 7:48 PMಮದುವೆ ಸಮಾರಂಭಗಳಲ್ಲಿ ಭಾವ ಚಿತ್ರಕ್ಕಾಗಿ ಸ್ಟುಡಿಯೋಗಳಿಗೆ ಕಾಂಟ್ರ್ಯಾಕ್ಟ್ ಕೊಡುವ ಮುನ್ನ ಎಚ್ಚರಿಕೆ.?! : ಕೇರಳದಲ್ಲಿ ಪತ್ತೆಯಾಗಿದೆ ವೆಡ್ಡಿಂಗ್ ಶೂಟ್ ಫೊಟೋಗಳು “ಪೊರ್ನೋಗ್ರಫಿಗೆ” ಬಳಕೆ.!6384

ಮಂಗಳೂರು : ಮದುವೆ ಸಮಾರಂಭಗಳಲ್ಲಿ ಭಾವ ಚಿತ್ರಕ್ಕಾಗಿ ಸ್ಟುಡಿಯೋಗಳಿಗೆ ಕಾಂಟ್ರ್ಯಾಕ್ಟ್ ಕೊಡುವ ಮುನ್ನ ಎಚ್ಚರಿಕೆ ವಹಿಸಿ. ನಿಮ್ಮ ಖಾಸಗಿ ಚಿತ್ರಗಳು ನಾಳೆ ‘ಪೊರ್ನ್’ ಸಿನೆಮಾದಲ್ಲಿ ಬರಬಹುದು. ಇಂಥದ್ದೇ ಒಂದು ಜಾಲ ಇದೀಗ ಕೇರಳದಲ್ಲಿ ಪತ್ತೆಯಾಗಿದೆ. ಮದುವೆಯಂಥ ಸಂದರ್ಭಗಳು ಬಂದಾಗ ಪ್ರತಿ ಕ್ಷಣವನ್ನೂ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಅದಕ್ಕಾಗಿಯೇ ಮದುವೆ ಸಮಾರಂಭಗಳಲ್ಲಿ ಭಾವ ಚಿತ್ರ ತೆಗೆಯುವುದು ಇಂದು ಅತಿ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಫೋಟೊ ಶೂಟ್ ಮಾಡಿಸುವವರು ಒಮ್ಮೆಯಾದರೂ ಈ ಸುದ್ದಿಯನ್ನು ಓದಲೇಬೇಕು. ಕೇರಳದಲ್ಲಿ ಒಂದು ಸ್ಟುಡಿಯೋ ಮದುವೆಯಲ್ಲಿ ತೆಗೆದ ಮಹಿಳೆಯ ಭಾವ ಚಿತ್ರಗಳನ್ನು ‘ಪೊರ್ನೋಗ್ರಫಿ’ಗೆ ಬಳಕೆ ಮಾಡುತ್ತಿತ್ತು. ಈ ಗಂಭೀರ ಪ್ರಕರಣ ಹೊರಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ತನಿಖಾ ತಂಡ ರಚಿಸಿ, ತನಿಖೆಗೆ ಆದೇಶಿಸಿದ್ದಾರೆ. ಈ ಜಾಲ ಎಲ್ಲಾ ರಾಜ್ಯಗಳಲ್ಲೂ ತನ್ನ ಬೇರೂರಿರುವ ಸಾಧ್ಯತೆಯಿದೆ.

ಹೇಗೆ ಮದುವೆ ಸಮಾರಂಭಗಳಲ್ಲಿ ಫೋಟೊ ತೆಗೆಯುವುದು ದೊಡ್ಡ ಉದ್ಯಮವಾಗಿ ಬೆಳೆದಿದೆಯೋ ಅದಕ್ಕಿಂತ ದೊಡ್ಡ ಉದ್ಯಮ ‘ಪೊರ್ನೋಗ್ರಫಿ’. ಮದುವೆಯಲ್ಲಿ ಫೋಟೊ ತೆಗೆದು ಗಳಿಸುವ ಹಣದ ನೂರು ಪಟ್ಟು ಹಣವನ್ನು ಪಾರ್ನಾಗ್ರಫಿಯಲ್ಲಿ ಗಳಿಸಬಹುದು ಎಂಬುದನ್ನು ಅರಿತ ಕೇರಳದ ಕೋಳಿಕೊಡೆಯಲ್ಲಿರುವ ಸದಾಯಮ್ ಶೂಟ್ ಮತ್ತು ಎಡಿಟ್ ಸ್ಟುಡಿಯೋ ಸದಸ್ಯರು ಮಹಿಳೆಯರ ಫೋಟೊ ದುರ್ಬಳಕೆಗೆ ಆರಂಭಿಸಿದರು. ಹಲವು ವರ್ಷಗಳಿಂದ ಫೋಟೊ ಶೂಟ್ ಮಾಡುತ್ತಿರುವ ಸದಾಯಮ್ ತಂಡ ನೂರಾರು ಮಹಿಳೆಯರ ಭಾವಚಿತ್ರಗಳನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಏನಿದು ಪ್ರಕರಣ?:
ಮದುವೆ ಮತ್ತಿತರ ಕುಟುಂಬ ಸಮಾರಂಭಗಳ ಕಾಂಟ್ರ್ಯಾಕ್ಟ್ ಪಡೆಯುತ್ತಿದ್ದ ಕೇರಳದ ಸದಾಯಮ್ ಸ್ಟುಡಿಯೋ ಆಲ್ಬಮ್‌ಗಳನ್ನು ಮಾಡಿಕೊಡುತ್ತಿತ್ತು. ಜತೆಗೆ ಮದುವೆ ಪೂರ್ವದ ಫೋಟೊ ಶೂಟ್‌ಗಳನ್ನೂ ಮಾಡುತ್ತಿತ್ತು. ಅದೇ ರೀತಿಯಲ್ಲಿ ತನ್ನದೇ ವಿಡಿಯೋ ಸಂಪಾದಕರನ್ನು ಹೊಂದಿದ್ದ ಸದಾಯಮ್ ಸ್ಟುಡಿಯೋ ಮದುವೆಗಳಲ್ಲಿ ತೆಗೆದ ಹೆಣ್ಣು ಮಕ್ಕಳ ಫೋಟೊಗಳನ್ನು ‘ಮಾರ್ಫ್’ ಮಾಡಿ ಪಾರ್ನಾಗ್ರಫಿಗೆ ಬಳಸುತ್ತಿತ್ತು. ಇತ್ತೀಚೆಗಷ್ಟೇ ಮದುವೆಯಾದ ದಂಪತಿಯೊಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಶಾಕ್ ಕಾದಿತ್ತು. ಮದುವೆಯಾದ ಮಹಿಳೆಯ ವಸ್ತ್ರ ರಹಿತ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಡಲಾಗಿತ್ತು. ಮೊದಲು ಹುಡುಗಿಯ ಮೇಲೆ ಅನುಮಾನ ಮೂಡಿದರೂ, ನಂತರ ನಡೆದ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದಾಗ ಇದು ಮಾರ್ಫ್ ಮಾಡಿದ ಭಾವ ಚಿತ್ರಗಳು ಎಂಬುದು ಖಾತರಿಯಾಗಿತ್ತು. ನಂತರ ಸ್ಟುಡಿಯೋ ಬಗ್ಗೆ ಅನುಮಾನ ಮೂಡಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಕೋಳಿಕೊಡೆ ಪೊಲೀಸರಿಗೆ, ಹೆಚ್ಚಿನ ಮಾಹಿತಿ ಲಭ್ಯವಾಗಿತ್ತು. ಸ್ಟುಡಿಯೋದಲ್ಲಿ ಇದೇ ರೀತಿ ನೂರಾರು ಮಹಿಳೆಯರ ಭಾವ ಚಿತ್ರಗಳನ್ನು ಮಾರ್ಫ್ ಮಾಡಲಾಗಿತ್ತು. ಇದು ದೊಡ್ಡ ಜಾಲವಾಗಿದ್ದು, ಇತರೆ ರಾಜ್ಯಗಳಲ್ಲೂ ಸ್ಟುಡಿಯೋಗಳು ಮಹಿಳೆಯರ ಫೋಟೊಗಳನ್ನು ಪೊರ್ನೋಗ್ರಫಿಗೆ ಬಳಸುತ್ತಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ವಿಜಯನ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಮೂಲಗಳ ಪ್ರಕಾರ ಮದುವೆಗಳಲ್ಲಿ ತಮಗೆ ಮಾರ್ಫ್ ಮಾಡಲು ಬೇಕಾದ ರೀತಿಯಲ್ಲಿ ಫೋಟೊಗಳನ್ನು ಸ್ಟುಡಿಯೋ ಮಂದಿ ತೆಗೆದುಕೊಳ್ಳುತ್ತಿದ್ದರು. ನಂತಗರ ಆಯ್ದ ಚಿತ್ರಗಳನ್ನು ಆಲ್ಬಮ್ ಮಾಡಿಕೊಟ್ಟು, ಉಳಿದ ಚಿತ್ರಗಳನ್ನು ಪಾರ್ನಾಗ್ರಫಿಗೆ ಬಳಸುತ್ತಿದ್ದರು.

ಸದಾಯಮ್ ಸ್ಟುಡಿಯೋ ನಡೆಸುತ್ತಿದ್ದ ದಿನೇಶನ್ ಮತ್ತು ಸತೀಶನ್ ಎಂಬುವವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಜತೆಗೆ ದಕ್ಷಿಣ ಭಾರತದ ಇನ್ನಿತರ ರಾಜ್ಯಗಳಾದ ಕರ್ನಾಟಕ, ತಮಿಳು ನಾಡು, ಆಂಧ್ರ ಪ್ರದೇಶ, ತೆಲಂಗಾಣಗಳಲ್ಲಿ ಆರೋಪಿಗಳ ಲಿಂಕ್ ಇದೆಯೇ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಲಯಾಳಮ್ ಪತ್ರಿಕೆಯೊಂದು ವರದಿ ಮಾಡಿದೆ. ಕೇರಳ ವಿಧಾನ ಸಭೆಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್, “ಇಬ್ಬರನ್ನು ಈಗಾಗಲೇ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಬಿಬ್ಲೀಶ್ ಎಂಬ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ,” ಎಂದು ಉತ್ತರಿಸಿದ್ದಾರೆ. ತನಿಖೆ ವೇಳೆ ಒಟ್ಟೂ ೪೦,೦೦೦ ಮಹಿಳೆಯರ ಭಾವ ಚಿತ್ರಗಳು ಸ್ಟುಡಿಯೋದಲ್ಲಿ ಪತ್ತೆಯಾಗಿವೆ. ಇದು ಹಲವು ವರ್ಷಗಳಿಂದ ಸಂಗ್ರಹಿಸಿದ ಫೋಟೊಗಳಾಗಿದ್ದು, ಹಾರ್ಡ್ ಡಿಸ್ಕ್‌ನಲ್ಲಿ ಕಾಪಿ ಮಾಡಿಡಲಾಗಿತ್ತು ಎನ್ನಲಾಗಿದೆ. ತನಿಖಾಧಿಕಾರಿಯಾಗಿರುವ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಭಾನುಮತಿ, ಕೇರಳದ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

ಏನಿದು ಮಾರ್ಫಿಂಗ್?:
ಮಾರ್ಫಿಂಗ್ ಎಂದರೆ ಒಬ್ಬರ ದೇಹಕ್ಕೆ ಇನ್ನೊಬ್ಬರ ಮುಖ ಅಥವಾ ಇನ್ನೊಬ್ಬರ ಮುಖಕ್ಕೆ ದೇಹ ಅದಲು ಬದಲು ಮಾಡುವುದು. ಇದು ಹಲವು ವರ್ಷಗಳಿಂದ ಪೊರ್ನೋಗ್ರಫಿ ಉದ್ಯಮದ ಭಾಗವಾಗಿದ್ದು, ಪ್ರಸಿದ್ಧ ಚಲನ ಚಿತ್ರ ನಟಿಯರನ್ನು ಕಾಡುತ್ತಲೇ ಬಂದಿದೆ. ಪ್ರಸಿದ್ಧ ನಟಿಯರ ಭಾವಚಿತ್ರವನ್ನು ಪೊರ್ನ್ ಸ್ಟಾರ್ ಒಬ್ಬರ ದೇಹದ ಜತೆ ಮ್ಯಾಚ್ ಮಾಡಿ ಹಲವು ಬಾರಿ ನಟಿಯರನ್ನು ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿಸಿದ ಉದಾಹರಣೆಗಳಿವೆ. ಅದಕ್ಕೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ಪ್ರಿಯಾಂಕ ಚೋಪ್ರಾ, ಕಾಜೋಲ್ ಸೇರಿದಂತೆ ನೂರೆಂಟು ಮಂದಿ ಬಲಿಯಾಗಿದ್ದಾರೆ. ಅದೇ ರೀತಿ ಈ ಮಾರ್ಫಿಂಗ್ ಉದ್ಯಮ ಬ್ಲಾಕ್‌ಮೇಲ್ ದಂಧೆಯಾಗೂ ಬಳಕೆಯಾಗಿದೆ. ಅಮಾಯಕ ಮಹಿಳೆಯರ ಮತ್ತು ಪುರುಷರ ಭಾವಚಿತ್ರಗಳನ್ನು ಮಾರ್ಫ್ ಮಾಡಿ ಬ್ಲಾಕ್ ಮೇಲ್ ಮಾಡುವ ದಂಧೆಗಳೂ ನಾಯಿಕೊಡೆಗಳಂತೆ ಹಬ್ಬಿಕೊಂಡಿದೆ. ಒಂದು ಸರ್ವೇ ಪ್ರಕಾರ ಪ್ರತಿ ವರ್ಷ ಹಾಲಿವುಡ್ ಸಿನೆಮಾಗಳಿಗೆ ಹೂಡಿಕೆಯಾಗುವ ಹಣದ ದುಪ್ಪಟ್ಟು ಹಣ ಪೊರ್ನೋಗ್ರಫಿಯಲ್ಲಿ ಹೂಡಿಕೆಯಾಗುತ್ತದೆ. ಜತೆಗೆ ಆ ಹೂಡಿಕೆಯಿಂದ ಗಳಿಕೆಯೂ ಕೂಡ ಹಾಲಿವುಡ್‌ಗಿಂತ ದೈತ್ಯ ಮೊತ್ತದ್ದೇ ಆಗಿದೆ. ಅದಕ್ಕಾಗಿಯೇ ಎಷ್ಟೋ ನಟಿಯರು ಪೊರ್ನೋಗ್ರಫಿಯನ್ನೇ ಉದ್ಯಮವಾಗಿ ಸ್ವೀಕರಿಸಿದ್ದಾರೆ. ಕಡಿಮೆ ಎಂದರೂ ವರ್ಷಕ್ಕೆ ೧೫ರಿಂದ ೨೦ ಬಿಲಿಯನ್ ಡಾಲರ್‌ಗಳಷ್ಟು ಆದಾಯ ಪೊರ್ನೋಗ್ರಫಿ ಉದ್ಯಮದಲ್ಲಿದೆ. ಈ ಕಾರಣಕ್ಕಾಗಿಯೇ ಭಾರತದಲ್ಲೂ ಇತ್ತೀಚಿನ ವರ್ಷಗಳಲ್ಲಿ ಪೊರ್ನೋಗ್ರಫಿ ಆರಂಭವಾಗಿದೆ. ಅನೈಸರ್ಗಿಕವಾದ ಪೊರ್ನೋಗ್ರಫಿಗಳಿಂದ ಅಪಾಯ ಹೆಚ್ಚು ಎಂಬುದನ್ನು ಸಂಶೋಧನೆಗಳು ಆಗಾಗ ಕೇಳಿ ಬರುತ್ತಲೇ ಇದ್ದರೂ, ದಿನದಿಂದ ದಿನಕ್ಕೆ ನೋಡುಗರು ಹೆಚ್ಚುತ್ತಲೇ ಇದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಮಾರ್ಫಿಂಗ್ ದಂಧೆಯಂತೆ ಕರ್ನಾಟಕ ರಾಜ್ಯದಲ್ಲೂ ಇರಬಹುದು. ಮದುವೆ ಸಮಾರಂಭಗಳ ಕವರೇಜ್‌ಗೆ ಸ್ಟುಡಿಯೋಗೆ ಕಾಂಟ್ರ್ಯಾಕ್ಟ್ ನೀಡುವ ಮುನ್ನ ಪೂರ್ವಾಪರ ಅರಿಯುವುದು ಒಳಿತು. ಖಾಸಗಿ ಸಮಾರಂಭವಾದ ಮದುವೆ ಮಧುರ ಘಳಿಗೆಯಾಗಿ ಉಳಿಯಬೇಕು, ಜತೆಗೆ ನಿಮ್ಮ ಖಾಸಗೀತನವೂ ಹಾಗೆಯೇ ಉಳಿಯಬೇಕು ಎಂದರೆ ಎಚ್ಚರಿಕೆ ಅನಿವಾರ್ಯ.
ಕೃಪೆ : ಸಮಾಚಾರ

error: Content is protected !!