Sunday, September 23 , 2018 4:03 AMಬಂಟ್ವಾಳದಲ್ಲಿ ಮುಂದುವರೆದ ಬಿಜೆಪಿ ವಿರುದ್ಧ ಪೋಸ್ಟರ್ ವಾರ್.!309

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅತ್ಯಂತ ಕುತೂಹಲ ಹಾಗೂ ಜಿದ್ದಾಜಿದ್ದಿನಿಂದ ಕೂಡಿದ ಕ್ಷೇತ್ರವಾಗಿದ್ದು, ಇಲ್ಲಿ ಆರಂಭವಾಗಿರುವ ಪೋಸ್ಟರ್ ವಾರ್ ಈಗ ತಾರಕಕ್ಕೇರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇರ ಜಿದ್ದಾಜಿದ್ದಿನ ಸ್ಪರ್ಧೆ ಇರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಇದೆ. ಇಲ್ಲಿ ಚುನಾವಣೆ ಧರ್ಮ ರಾಜಕಾರಣದ ಮೇಲೆ ಅವಲಂಬಿತವಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಬಂಟ್ವಾಳ ಕ್ಷೇತ್ರದಲ್ಲಿ ನಡೆಯುತ್ತಿರುವ ಪೋಸ್ಟರ್ ರಾಜಕೀಯ. ಇತ್ತೀಚೆಗೆ ಕಾಂಗ್ರೆಸ್ ವಿರುದ್ಧ ಮನೆ ಬಾಗಿಲಿಗೆ ಪೋಸ್ಟರ್ ಅಂಟಿಸುವ ಅಭಿಯಾನ ಭಾರೀ ಸುದ್ದಿಯಾಗಿತ್ತು. ಆದರೆ ಈಗ ಬಿಜೆಪಿ ವಿರುದ್ಧ ಪೋಸ್ಟರ್ ವಾರ್ ಆರಂಭವಾಗಿದೆ. ಬಂಟ್ವಾಳ ಕ್ಷೇತ್ರದ ನೂರಾರು ಮನೆಗಳ ಹಚ್ಚಿದ್ದ ಪೋಸ್ಟರ್ ದೇಶದಾದ್ಯಂತ ವ್ಯಾಪಕ ಪ್ರಚಾರ ಪಡೆದಿತ್ತು. ಇದೀಗ ಬಿಜೆಪಿಯ ಈ ಪೋಸ್ಟರ್ ರಾಜಕೀಯದ ವಿರುದ್ಧ ಕಾಂಗ್ರೆಸ್ ಕೂಡ ಪೋಸ್ಟರ್ ಅಭಿಯಾನ ಅರಂಭಿಸಿ ಸುದ್ದಿಮಾಡಿದೆ. ಬಂಟ್ವಾಳದ ನಾವೂರು, ಬಡಕಬೈಲು, ಸಿದ್ದಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಆರಂಭವಾದ ಈ ಪೋಸ್ಟರ್ ಪ್ರತಿ ಚಳವಳಿ ಈಗ ಬಂಟ್ವಾಳ ಕ್ಷೇತ್ರದಾದ್ಯಂತ ವ್ಯಾಪಿಸಿದೆ. “ತಮ್ಮ ರಾಜಕೀಯದ ನೆಲೆಗಾಗಿ ಹಿಂದೂಗಳನ್ನೇ ಹತ್ಯೆ ಮಾಡಿದ ಹಿಂದುತ್ವವಾದಿಗಳಿಗೆ ಧಿಕ್ಕಾರ. ಮತ ಕೇಳಲು ನಮ್ಮ ಮನೆಗೆ ಬರಬೇಡಿ,” ಎಂಬ ಪೋಸ್ಟರ್ ಈಗ ಹಲವಾರು ಮನೆಗಳಲ್ಲಿ ಕಂಡು ಬರತೊಡಗಿವೆ. ಇದೀಗ ಸಿದ್ಧಕಟ್ಟೆ, ಸಂಗಬೆಟ್ಟು ಪರಿಸರದಲ್ಲಿರುವ ಕೆಲ ಮನೆಗಳ ಎದುರು ’ಸಿದ್ಧಕಟ್ಟೆ ಭಾರತಿ ಕೊಲೆಗಾರರಿಗೆ ನಮ್ಮ ಮನೆಗೆ ಪ್ರವೇಶವಿಲ್ಲ’ ಎಂಬ ಭಿತ್ತಿಪತ್ರ ಅಂಟಿಸಲಾಗಿದ್ದರೆ, ಇನ್ನೊಂದು ಕಡೆ “ಹರೀಶ್ ಪೂಜಾರಿ ನಾವೂರು ಹತ್ಯೆ ನಡೆಸಿದ ಬಿಜೆಪಿಯವರಿಗೆ ನಮ್ಮ ಮನೆಗೆ ಪ್ರವೇಶ ಇಲ್ಲ” ಎಂಬ ಭಿತ್ತಿ ಪತ್ರಗಳು ಮನೆ ಎದುರು ಅಂಟಿಸಲಾಗಿದೆ. ಬಂಟ್ವಾಳದಲ್ಲಿ ನಡೆಯುತ್ತಿರುವ ಈ ಪೋಸ್ಟರ್ ವಾರ್ ಕುರಿತು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಈ ಭಿತ್ತಿಪತ್ರ ರಾಜಕೀಯ ಚುನಾವಣೆಯ ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

error: Content is protected !!