Sunday, September 23 , 2018 3:57 AMಡಿ.ಸಿ.ಐ.ಬಿ. ಪೊಲೀಸರ ಮಿಂಚಿನ ಕಾರ್ಯಚರಣೆ; ನಟೋರಿಯಸ್ ಕ್ರಿಮಿನಲ್ ಉಣ್ಣಿಕೃಷ್ಣನ್ ಕೊಲೆ ಪ್ರಕರಣ ಭೇಧಿಸಿದ ಪೊಲೀಸರಿಗೆ ಬಹುಮಾನ ಘೋಷಣೆ332

ಮಂಗಳೂರು: ನಟೋರಿಯಸ್ ಕ್ರಿಮಿನಲ್‌ವೊಬ್ಬನನ್ನು ಕೊಂದು ಶವವನ್ನು ಕುಪ್ಪೆಟ್ಟಿಯಲ್ಲಿನ ಸೇತುವೆಯಲ್ಲಿ ಎಸೆದು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಡಿ.ಸಿ.ಐ.ಬಿ. ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಎರ್ನಾಕುಲಂ ಜಿಲ್ಲೆಯ ಆಲುವಾದ ಕಂಬಿನಿಪ್ಪಡಿ ಕೊಟ್ಟಕ್ಕಾಕಾತ್ ಮನೆಯ ಔರಂಗಜೇಬ್(೩೭) ಹಾಗೂ ಪಾಲಕ್ಕಾಡು ಜಿಲ್ಲೆಯ ಅಲೆತ್ತೂರು ತಾಲೂಕಿನ ಚುಂದಕಾಡು ಕಾವಶ್ಯ್ಪೆರಿ ಗ್ರಾಮದ ಕೊಕ್ರತ್ತಲ್ ನಿವಾಸಿ ಮಹಮ್ಮದ್ ಶಮನಾಝ್ (೨೩) ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಅಪ್ಪ ಯಾನೆ ಉಣ್ಣಿ ಮತ್ತು ಸೊಹೈಲ್ ಎಂಬ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಘಟನೆಯ ವಿವರ; ಎರ್ನಾಕುಲಂನಲ್ಲಿ ಅನಾಸ್ ಎಂಬಾತ ದೊಡ್ಡ ರೌಡಿಯಾಗಿದ್ದು, ಈತನ ಬಲಗೈ ಬಂಟನಂತಿದ್ದ ಉಣ್ಣಿಕೃಷ್ಣನ್ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಇದೇ ತಂಡದಲ್ಲಿ ಔರಂಗಜೇಬ, ಅಪ್ಪು ಯಾನೆ ಉಣ್ಣಿ, ಮಹಮ್ಮದ್ ಶನಾಝ್ ಹಾಗೂ ಸೊಹೈಲ್ ಕೂಡ ಇದ್ದರು. ಅನಾಸ್ ನೇತೃತ್ವದಲ್ಲಿ ಈ ತಂಡ ದ.ಕ. ಜಿಲ್ಲೆಯಲ್ಲಿಯೂ ಜಾಗದ ವ್ಯವಹಾರ ನಡೆಸುತ್ತಿತ್ತು. ಹಣದ ವಸೂಲಿಗೆ ಉಣ್ಣಿಕೃಷ್ಣನ್ ಬಂದು ಹೋಗುತ್ತಿದ್ದ. ಜಾಗದ ವ್ಯವಹಾರವೊಂದಕ್ಕೆ ಸಂಬಂಧಿಸಿ ಅನಾಸ್‌ಗೆ ೨೫ ಲ. ರೂ. ಬರಲು ಬಾಕಿಯಿದ್ದು, ಅದರ ವಸೂಲಿಗಾಗಿ ಉಣ್ಣಿಕೃಷ್ಣನ್ ಈ ನಾಲ್ವರನ್ನು ಸೇರಿಸಿಕೊಂಡು ಆ.೩೦ರಂದು ರಾತ್ರಿ ಎರ್ನಾಕುಲಂನಿಂದ ಇನ್ನೋವಾ ಕಾರಿನಲ್ಲಿ ಉಪ್ಪಿನಂಗಡಿಗೆ ಬಂದು ಇಲ್ಲಿನ ಆದಿತ್ಯ ಲಾಡ್ಜ್ ನಲ್ಲಿ ತಂಗಿದ್ದ. ಸೆ.೧ರ ಮುಂಜಾನೆ ೧:೪೫ರ ಸಮಯದಲ್ಲಿ ರೂಮಿನಿಂದ ಕಾರಿನಲ್ಲಿ ನೆಲ್ಯಾಡಿ ಕಡೆಗೆ ತೆರಳಿದ್ದರು. ಬಳಿಕ ದಾರಿ ತಪ್ಪಿತೆಂದು ರಾ.ಹೆದ್ದಾರಿಯಲ್ಲಿ ವಾಪಸ್ ಬರುತ್ತಿದ್ದರು. ಆಗ ಕಾರಿನ ಎದುರಿನ ಸೀಟಿನಲ್ಲಿ ಕುಳಿತು ನಿದ್ರಿಸುತ್ತಿದ್ದ ಉಣ್ಣಿಕೃಷ್ಣನ್‌ನ ಕೊರಳಿಗೆ ಹಿಂದಿನಿಂದ ಮಹಮ್ಮದ್ ಶನಾಝ್ ನೈಲಾನ್ ಹಗ್ಗದಿಂದ ಬಿಗಿದಿದ್ದ. ಔರಂಗಜೇಬ ಹಾಗೂ ಅಪ್ಪು ಯಾನೆ ಉಣ್ಣಿ ಚಾಕುವಿನಿಂದ ಇರಿದು ಕೊಂದಿದ್ದರು. ಬಳಿಕ ಮೃತ ದೇಹವನ್ನು ಕಾರಿನಲ್ಲಿಟ್ಟುಕೊಂಡು ಉಪ್ಪಿನಂಗಡಿ ಮೂಲಕ ಗುರುವಾಯನಕೆರೆ ರಸ್ತೆಯಲ್ಲಿ ಸಾಗಿದ್ದು, ಕುಪ್ಪೆಟ್ಟಿ ಸೇತುವೆ ಸಮೀಪದ ಹೊಳೆಯಲ್ಲಿ ಎಸೆದು ಕಾರಿನಲ್ಲಿ ಪರಾರಿಯಾಗಿದ್ದರು. ಔರಂಗಝೀಬ್ ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಕೊಲೆಯತ್ನ, ದರೋಡೆ ಪ್ರಕರಣ ಸಹಿತ ಒಟ್ಟು ೯ ಪ್ರಕರಣಗಳು ದಾಖಲಾಗಿದ್ದು, ಉಣ್ಣಿಕೃಷ್ಣನ್ ಮೇಲೆ ೧೬ ಪ್ರಕರಣಗಳಿವೆ.

ಉಣ್ಣಿಕೃಷ್ಣನ್‌ನ ಮೃತದೇಹವು ಕುಪ್ಪೆಟ್ಟಿ ಸೇತುವೆಯ ಬಳಿಯಲ್ಲಿ ಸೆ.೩ರಂದು ಸಂಜೆ ಸ್ಥಳೀಯರಿಗೆ ಕಂಡು ಬಂದಿದೆ. ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಶವದಲ್ಲಿದ್ದ ಆಧಾರ್ ಕಾರ್ಡ್‌ನಿಂದಾಗಿ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಮೃತದೇಹದಲ್ಲಿ ಗಾಯದ ಗುರುತು ಕಂಡು ಬಂದ ಕಾರಣ ಪೊಲೀಸರು ೧೭೪(ಸಿ) ಸೆಕ್ಷನ್‌ನಡಿ ಪ್ರಕರಣ ದಾಖಲಿಸಿ, ಆತನ ಮನೆಯವರಿಗೆ ಮಾಹಿತಿ ನೀಡಿದ್ದರು. ಕುಟುಂಬಿಕರು ಇದೊಂದು ಕೊಲೆ ಎಂದು ಆರೋಪಿಸಿದ್ದರಿಂದ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮೃತದೇಹವನ್ನು ಉಪ್ಪಿನಂಗಡಿಯಲ್ಲಿರುವ ನೇತ್ರಾವತಿ ಸೇತುವೆಯ ಕೆಳಗೆ ಬಿಸಾಡಲು ಯೋಜನೆ ಹಾಕಿಕೊಂಡು ತೆರಳಿದ್ದರು. ಅಲ್ಲಿ ಕಾರು ನಿಲ್ಲಿಸಿದಾಗ ನದಿಯಲ್ಲಿ ವ್ಯಕ್ತಿಯೋರ್ವ ಗಾಳ ಹಾಕುತ್ತಿರುವುದನ್ನು ಕಂಡು ಮುಂದಕ್ಕೆ ಹೋಗಿ ಕುಪ್ಪೆಟ್ಟಿ ಹೊಳೆಯಲ್ಲಿ ಎಸೆದಿದ್ದರು ಎನ್ನಲಾಗಿದೆ. ಆರೋಪಿಗಳು ಹಾಗೂ ಇನ್ನೋವಾ ಕಾರನ್ನು ಸೆ.೬ರಂದು ಕಾಸರಗೋಡಿನಿಂದ ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಸ್ಥಳ ಮಹಜರು ನಡೆಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ರವೀಕಾಂತೇ ಗೌಡ, ಹೆಚ್ಚುವರಿ ಎಸ್ಪಿ ಸಜಿತ್ ವಿ.ಜೆ. ಅವರ ನಿರ್ದೇಶನದಂತೆ ಡಿ.ಸಿ.ಐ.ಬಿ. ಪೊಲೀಸ್ ನಿರೀಕ್ಷಕ ಸುನೀಲ್ ವೈ. ನಾಯಕ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ತಂಡದಲ್ಲಿ ಸಿಬಂದಿ ನಾರಾಯಣ, ವಾಸು ನಾಯ್ಕ, ಲಕ್ಷ್ಮಣ ಕೆ.ಜಿ., ಇಕ್ಬಾಲ್ ಎ.ಇ., ಉದಯ ರೈ, ಪ್ರವೀಣ್ ಎಂ., ತಾರಾನಾಥ್, ಉದಯ ಗೌಡ, ಪ್ರವೀಣ ರೈ ಮತ್ತು ಸುರೇಶ್ ಪೂಜಾರಿ ಭಾಗವಹಿಸಿದ್ದಾರೆ. ಈ ತಂಡಕ್ಕೆ ಎಸ್‌ಪಿ ಬಹುಮಾನ ಘೋಷಿಸಿರುತ್ತಾರೆ.

error: Content is protected !!