Thursday, August 16 , 2018 7:48 PM











ಕರಾವಳಿಯಲ್ಲಿ ಮತ್ತೆ ಹೆಚ್ಚಿದ ಮಳೆಯ ಅಬ್ಬರ! : ರಥಬೀದಿಯಲ್ಲಿ ಕಟ್ಟಡದ ಛಾವಣಿ ಕುಸಿತ, ನಜ್ಜುಗುಜ್ಜಾದ ಎರಡು ಬೈಕ್!



1866

ಮಂಗಳೂರು : ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಸಮುದ್ರ ಪ್ರಕ್ಷುಬ್ಧಗೊಂಡಿದೆ. ಶನಿವಾರ ಮುಂಜಾನೆಯಿಂದ ಮಂಗಳೂರು ಸೇರಿದಂತೆ ಜಿಲ್ಲೆಯ ಇತರೆಡೆ ಉತ್ತಮ ಮಳೆಯಾಗುತ್ತಿದೆ. ಈ ಪರಿಣಾಮ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಈ ಮಧ್ಯೆ ನಗರದ ರಥಬೀದಿಯಲ್ಲಿರುವ ಕಟ್ಟಡದ  ಕಾಂಕ್ರೀಟ್ ಛಾವಣಿ ಕುಸಿದು ರಸ್ತೆಗೆ ಬಿದ್ದಿದೆ. ಈ ವೇಳೆ ರಸ್ತೆ ಬದಿ ನಿಲ್ಲಿಸಿದ ಎರಡು ಬೈಕ್ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿದ್ದು, ಕಟ್ಟಡದ ಅವಶೇಷಗಳ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು ಜಿಲ್ಲೆ ಸೇರಿದಂತೆ ಕರಾವಳಿಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಮಳೆಯೊಂದಿಗೆ ವೇಗವಾಗಿ ಜೋರಾದ ಗಾಳಿಯೂ ಬೀಸುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಬಿರುಸಿನ ಮಳೆಯೊಂದಿಗೆ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಜಿಲ್ಲೆಯ ಹಲವೆಡೆ ಮರಗಳು ನೆಲಕ್ಕುರುಳಿವೆ. ಜಿಲ್ಲೆಯ ಹಲವು ಭಾಗದಲ್ಲಿ ವಿದ್ಯುತ್ ಕೈಕೊಟ್ಟಿದೆ. ಗಾಳಿಯ ರಭಸದಿಂದಾಗಿ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿದ್ದು ಕಡಲು ಭೋರ್ಗರೆಯುತ್ತ ದಡಕ್ಕೆ ಅಪ್ಪಳಿಸುತ್ತಿದೆ.

ಕೇಂದ್ರ ಹವಾಮಾನ ಇಲಾಖೆ ಶುಕ್ರವಾರ ರಾಜ್ಯ ಸರಕಾರಕ್ಕೆ ಪತ್ರ ಬರೆದು ಕರಾವಳಿಯಲ್ಲಿ ಜೂನ್ ೧೨ ರವರೆಗೆ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದ್ದು, ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿಯೂ ಭಾರಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹೊಳೆ, ನದಿಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.

error: Content is protected !!