Sunday, September 23 , 2018 11:25 PMಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಚಾಕು ಇರಿತ ಪ್ರಕರಣ: ದೋಷಾರೋಪ ಸಲ್ಲಿಕೆ354

ಬೆಂಗಳೂರು : ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಮೇಲಿನ ಚೂರಿ ಇರಿತ ಪ್ರಕರಣದಲ್ಲಿ ಆರೋಪಿ ತೇಜ್ ರಾಜ್ ಶರ್ಮಾ ವಿರುದ್ಧ ಪೊಲೀಸರು 60 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ನ್ಯಾಯದ ಪರ ಹೋರಾಟಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಧರ್ಮವನ್ನು ಶಿಕ್ಷಿಸುವುದು ತಪ್ಪಲ್ಲ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ನಾನು ಕೊಲೆ ಮಾಡಿಯೇ ಜಯಗಳಿಸಬೇಕಿತ್ತು ಎಂದು ಆರೋಪಿ ಹೇಳಿದ್ದಾನೆ.

ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಕಷ್ಟು ಬಾರಿ ಹೋದಾಗಲೂ ನ್ಯಾ. ವಿಶ್ವನಾಥ್ ಶೆಟ್ಟಿ ಸಹಕಾರ ನೀಡುತ್ತಿರಲಿಲ್ಲ. ನಾನು ಪ್ರಶ್ನೆ ಮಾಡಿದರೆ ನಗುತ್ತಾ ಉತ್ತರಿಸುತ್ತಿದ್ದರು. ಅವರು ನಗುತ್ತಿದ್ದರಿಂದ ನನಗೆ ಕೋಪ ಬರುತ್ತಿತ್ತು ಎಂದಿದ್ದಾನೆ. ಸಂಡೇಬಜಾರ್‌ನಲ್ಲಿ ರಾಮಣ್ಣ ಅವರ ಅಂಗಡಿಯಲ್ಲಿ 60 ರೂ. ಕೊಟ್ಟು ಚಾಕು ಖರೀದಿಸಿದ್ದೆ. ಆದರೆ ರಾಮಣ್ಣ ನನಗೆ ಮೋಸ ಮಾಡಿದ ಎಂದು ಹೇಳಿಕೆ ನೀಡಿದ್ದಾನೆ. ತನ್ನ ಪರವಾಗಿ ವಾದ ಮಂಡಿಸಲು ಯಾವ ವಕೀಲರೂ ಬೇಡ. ತಾನೇ ವಾದ ಮಾಡುವುದಾಗಿ ತೇಜ್ ರಾಜ್ ಹೇಳಿರುವುದಾಗಿ ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಮಾರ್ಚ್‌ 7ರಂದು ಲೋಕಾಯುಕ್ತ ಕಚೇರಿಯಲ್ಲಿಯೇ ತೇಜ್ ರಾಜ್ ಶರ್ಮಾ ಎಂಬಾತ ಹಲ್ಲೆ ಮಾಡಿದ್ದ. ವಿಶ್ವನಾಥ್ ಶೆಟ್ಟಿ ಅವರ ಹೊಟ್ಟೆ ಎದೆಗೆ ಆತ ಚೂರಿಯಿಂದ ಇರಿದಿದ್ದ. ತೀವ್ರ ಗಾಯಗೊಂಡಿದ್ದ ವಿಶ್ವನಾಥ್ ಶೆಟ್ಟಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು. ಆರೋಪಿ ತೇಜ್ ರಾಜ್ ಸರ್ಕಾರದ ವಿವಿಧ ಅಧಿಕಾರಿಗಳ ವಿರುದ್ಧ 18 ದೂರುಗಳನ್ನು ನೀಡಿದ್ದ. ಅವುಗಳ ವಿಚಾರಣೆ ಯಾವ ಹಂತದಲ್ಲಿದೆ ಎಂದು ತಿಳಿಯಲು ಪದೇ ಪದೇ ಲೋಕಾಯುಕ್ತ ಕಚೇರಿಗೆ ಭೇಟಿ ನೀಡುತ್ತಿದ್ದ. ತನ್ನ ದೂರುಗಳ ಕುರಿತು ಲೋಕಾಯುಕ್ತರು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶಗೊಂಡು ದಾಳಿ ನಡೆಸಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ.

error: Content is protected !!