Sunday, September 23 , 2018 3:01 AM











ಕುಖ್ಯಾತ ದರೋಡೆಕೋರ ಸರ್ದಾರ್ ಅಲಿಯಾಸ್ ಬಾಬು ಎನ್​ಕೌಂಟರ್ ನಕಲಿ; ಎಸ್​ಐ, ಪೇದೆ ವಿರುದ್ಧ ಕೊಲೆ ಕೇಸ್



373

ಬೆಂಗಳೂರು: ಮಂಗಳೂರಿನಲ್ಲಿ 2009ರಲ್ಲಿ ನಡೆದಿದ್ದ ಕುಖ್ಯಾತ ದರೋಡೆಕೋರ ಸರ್ದಾರ್ ಅಲಿಯಾಸ್ ಬಾಬು ಎನ್​ಕೌಂಟರ್ ನಕಲಿ ಎಂಬುದು ರಾಜ್ಯ ಮಾನವ ಹಕ್ಕುಗಳ ಆಯೋಗದ (ಎಸ್​ಎಚ್​ಆರ್​ಸಿ) ವಿಚಾರಣೆಯಲ್ಲಿ ಸಾಬೀತಾಗಿದೆ.

ನಕಲಿ ಎನ್​ಕೌಂಟರ್ ಮಾಡಿದ ಆರೋಪದ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಂದಿನ ಎಸ್​ಐ ಪ್ರಕಾಶ್ ಮತ್ತು ಪೇದೆ ಸುನೀಲ್​ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಮಂಗಳೂರು ಪೊಲೀಸ್ ಆಯುಕ್ತ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಎಸ್​ಎಚ್​ಆರ್​ಸಿ ಸೂಚನೆ ನೀಡಿದೆ. ಅಲ್ಲದೆ, ಪ್ರಕಾಶ್ ಮತ್ತು ಸುನೀಲ್​ಕುಮಾರ್ ವೇತನದಲ್ಲಿ 2 ಲಕ್ಷ ರೂ. ಕಡಿತ ಮಾಡಿ ಮೃತ ಸರ್ದಾರ್ ಕುಟುಂಬಕ್ಕೆ ಪರಿಹಾರ ಹಣವಾಗಿ ನೀಡುವಂತೆ ಗೃಹ ಇಲಾಖೆ ಅಪರ ಕಾರ್ಯದರ್ಶಿಗೆ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಕೆ.ಬಿ. ಚಂಗಪ್ಪ ಮತ್ತು ಆರ್.ಕೆ.ದತ್ತ ಸೂಚನೆ ನೀಡಿದ್ದಾರೆ.

2009ರ ಅ.8ರ ಸಂಜೆ 7.30ರಲ್ಲಿ ವಿಜಯಪುರದ ಜೈಲಿನಿಂದ ಇಬ್ಬರು ಕುಖ್ಯಾತ ದರೋಡೆಕೋರರು ತಪ್ಪಿಸಿಕೊಂಡು ಮಂಗಳೂರಿಗೆ ಬಂದು ಮೂವರು ಸಹಚರರ ಜತೆ ಮಾರುತಿ ಸ್ಪಿಫ್ಟ್ ಕಾರಿನಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದಾರೆ ಎಂದು ಎಸ್​ಐ ಪ್ರಕಾಶ್​ಗೆ

ಮಾಹಿತಿ ಸಿಕ್ಕಿತ್ತು. ಪ್ರಕಾಶ್ ತನ್ನ ಸಿಬ್ಬಂದಿ ಜತೆ ದರೋಡೆಕೋರರ ಬಂಧನಕ್ಕೆ ಸ್ವರ್ಣಗಿರಿ ಲೇಔಟ್ ಪದವಿನಂಗಡಿ ಬಳಿ ಕಾರಿನಲ್ಲಿ ಹೋಗಿ ಆರೋಪಿಗಳಿದ್ದ ಕಾರನ್ನು ಅಡ್ಡಗಟ್ಟಿದ್ದರು. ಈ ವೇಳೆ ದರೋಡೆಕೋರರು ಪೇದೆ ಸುನೀಲ್ ಮೇಲೆ ಗುಂಡು ಹಾರಿಸಿದಾಗ ಅದು ಸ್ವಲ್ಪದರಲ್ಲೇ ತಪ್ಪಿತ್ತು. ಆತ್ಮರಕ್ಷಣೆಗಾಗಿ ಸುನೀಲ್ ಪಿಸ್ತೂಲಿನಿಂದ 1 ಗುಂಡನ್ನು ಹಾರಿಸಿದಾಗ ಕಾರಿನ ಚಾಲಕನ ಎಡಗಡೆ

ಕುಳಿತಿದ್ದ ವ್ಯಕ್ತಿಗೆ ತಾಗಿ ಆತ ಬಿದ್ದಿದ್ದ. ಆತನನ್ನು ಮಂಗಳೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಿ ಇತರರನ್ನು ಬಂಧಿಸಲಾಗಿತ್ತು. ಗುಂಡೇಟು ತಿಂದಿದ್ದ ಸರ್ದಾರ್ ಮಾರ್ಗಮಧ್ಯೆ ಮೃತಪಟ್ಟಿದ್ದ. ಈ ಸಂಬಂಧ ಪೇದೆ ಸುನೀಲ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ವಿಚಾರಣೆ ಕೈಗೊಂಡ ಮಾನವ ಹಕ್ಕುಗಳ ಆಯೋಗ ಎನ್​ಕೌಂಟರ್ ಸಂಪೂರ್ಣ ವರದಿ ಪಡೆದು ವಿಚಾರಣೆ ನಡೆಸಿದಾಗ ನಕಲಿ ಎನ್​ಕೌಂಟರ್ ಎಂಬುದು ಸಾಬೀತಾಗಿದೆ.

ಎಸ್​ಪಿ, ಎಎಸ್​ಪಿ ವಿರುದ್ಧವೂ ಕ್ರಮ; ನಕಲಿ ಎನ್​ಕೌಂಟರ್ ನಡೆದಾಗ ದಕ್ಷಿಣ ಕನ್ನಡ ಜಿಲ್ಲಾ ಎಸ್​ಪಿ, ಎಎಸ್​ಪಿ ಮತ್ತು ಸರ್ಕಲ್ ಇನ್​ಸ್ಪೆಕ್ಟರ್​ಗಳ ಕರ್ತವ್ಯ ಲೋಪ ಎಸಗಿದ್ದಾರೆ. ಈ ಮೂವರ ವಿರುದ್ಧವೂ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಆಯೋಗ ಶಿಫಾರಸ್ಸು ಮಾಡಿದೆ. ಈ ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ಕುರಿತು 1 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ.

ವರದಿಯಿಂದ ದೃಢ; ಶವಪರೀಕ್ಷಾ ವರದಿಯಲ್ಲಿ ವೈದ್ಯರು, ಶವದ ಎದೆಯ ಎಡಭಾಗ ಮತ್ತು ಹೊಟ್ಟೆಯ ಬಲಭಾಗದಲ್ಲಿ ತೂತುಗಾಯದ ಮೇಲೆ ಎರಡು ತರಚಿದ ಗಾಯ ಇವೆ. 12 ರಿಂದ 24 ಅಂಗುಲ ದೂರದಿಂದ ಪಿಸ್ತೂಲನ್ನು ಉಪಯೋಗಿಸಿ ಗುಂಡು ಹಾರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಪೊಲೀಸರು ಕಾರಿನಲ್ಲಿ ಕುಳಿತಿದ್ದ ಸರ್ದಾರ್ ಮೇಲೆ ಗುಂಡು ಹಾರಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಜತೆಗೆ ಕಾರಿನ ಕಿಟಕಿಯ ಮೂಲಕ ಹಾರಿಸಿದಾಗ ಹೊಟ್ಟೆಗೆ ತಾಗುವುದು ಅಸಾಧ್ಯ. ಆರೋಪಿಯ ಹಿಡಿಯುವಾಗ ಅವಶ್ಯಕತೆಗಿಂತ ಹೆಚ್ಚು ಬಲಪ್ರಯೋಗ ಮಾಡಿದ್ದಾರೆ.

ಪ್ರಕರಣ ಬಚ್ಚಿಟ್ಟ ಪೊಲೀಸ್; ಪೊಲೀಸ್ ವಶದಲ್ಲಿ ಆರೋಪಿಗಳ ಎನ್​ಕೌಂಟರ್ ಅಥವಾ ಸಾವು ಸಂಭವಿಸಿದಾಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ ಸಾವಿನ ತನಿಖೆಯನ್ನು ಸಿಐಡಿ ಅಥವಾ ಸ್ವತಂತ್ರ ಸಂಸ್ಥೆಗೆ ಒಪ್ಪಿಸಬೇಕು. ಜತೆಗೆ ಮ್ಯಾಜಿಸ್ಟ್ರೇಟ್ ಸಮ್ಮಖದಲ್ಲಿ ಶವಪರೀಕ್ಷೆಯನ್ನು ವಿಡಿಯೋ ಮಾಡಬೇಕು. ಇದ್ಯಾವುದನ್ನು ಮಾಡದೆ ಪ್ರಕರಣವನ್ನು ಮುಚ್ಚಿಡಲಾಗಿತ್ತು. ಎಂದು ಆಯೋಗ ಕಿಡಿಕಾರಿದೆ.

error: Content is protected !!