Sunday, September 23 , 2018 3:19 AMಚಾರ್ಮಾಡಿ ಘಾಟ್‌ನಲ್ಲಿ ಸಂಕಷ್ಟದಲ್ಲಿದ್ದ ಪ್ರಯಾಣಿಕರ ನೆರವಿಗೆ ನಿಂತ ಶಾಸಕ ಹರೀಶ್ ಪೂಂಜ, ಎಸ್ಪಿ ಅಣ್ಣಮಲೈ, ಇನ್ಸ್‌ಫೆಕ್ಟರ್ ಸಂದೇಶ್!6338

Posted By: Ranjith Madanthyar

ಮಂಗಳೂರು : ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಅಡ್ಡವಾಗಿ ಗುಡ್ಡು ಕುಸಿದು ಬಿದ್ದು ವಾಹನ ಸಂಚಾರಕ್ಕೆ ಧಕ್ಕೆಯಾಗಿ, ಸಂಕಷ್ಟದಲ್ಲಿದ್ದ ಪ್ರಯಾಣಿಕರ ನೆರವಿಗೆ ನಿಂತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಚಿಕ್ಕಮಂಗಳೂರು ಎಸ್ಪಿ ಅಣ್ಣಮಲೈ ಹಾಗೂ ಬೆಳ್ತಂಗಡಿ ಇನ್ಸ್‌ಫೆಕ್ಟರ್ ಸಂದೇಶ್ ಅವರಿಗೆ ಸಾರ್ವಜನಿಕ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಉಜಿರೆ ಸಮೀಪದ ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಅಡ್ಡವಾಗಿ ಗುಡ್ಡು ಕುಸಿದು ಬಿದ್ದು ವಾಹನ ಸಂಚಾರಕ್ಕೆ ಧಕ್ಕೆಯಾಗಿತ್ತು.

ನಿನ್ನೆ ಸಂಜೆ ೬ಗಂಟೆಯಿಂದಲೂ ಇಲ್ಲಿ ವಾಹನ ಸವಾರರು ಪರದಾಡುತ್ತಿದ್ದರು. ಘಾಟ್‌ನ ೨ನೇ ತಿರುವಿನಲ್ಲಿ ಈ ಘಟನೆ ನಡೆದಿತ್ತು. ೧೫ಕ್ಕೂ ಹೆಚ್ಚು ಗಂಟೆಗಳಿಂದ ಜನರು ಸ್ಥಳದಲ್ಲಿ ಸಿಲುಕಿಕೊಂಡಿದ್ದರು. ಘಾಟ್‌ನಲ್ಲಿ ರಸ್ತೆ ಬಿರುಕು ಬಿಟ್ಟಿರುವುದು, ಮಣ್ಣು ಕುಸಿದು ರಸ್ತೆ ಮೇಲೆ ಬಿದ್ದಿರುವುದು, ಮೇಲಿಂದ ರಭಸವಾಗಿ ನೀರು ಬೀಳುತ್ತಿರುವುದು ಜನರನ್ನು ಇನ್ನಷ್ಟು ಭೀತಗೊಳಿಸಿತ್ತು. ಮತ್ತೊಂದು ಕಡೆಯಲ್ಲಿ ರಸ್ತೆಯಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು.

ಈ ಮಧ್ಯೆ ಚಾರ್ಮಾಡಿ ಘಾಟಿಯಲ್ಲಿ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ದಾರಿ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಸುದ್ದಿ ತಿಳಿದ ಕೂಡಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನಿನ್ನೆ ರಾತ್ರಿ ಮತ್ತು ಇಂದು ಮುಂಜಾನೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ರಸ್ತೆ ತೆರವುಗೊಳಿಸುವ ಪ್ರಯತ್ನ ಆರಂಭಿಸಿದರು. ತಮ್ಮ ಕಾರ್ಯಕರ್ತರ ತಂಡದ ಜೊತೆಗೆ ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ಬೆಳಗಿನಿಂದಲೇ ಕುಡಿಯುವ ನೀರು, ಹಾಲು, ಔಷಧಿಯನ್ನು ನೀಡುವ ಪ್ರಯತ್ನ ಮಾಡಿದರು.

 ಸುಮಾರು 2000 ಜನರಿಗೆ ಆಗುವಷ್ಟು ಮಧ್ಯಾಹ್ನದ ಊಟ ಹಾಗೂ ಬೆಳ್ಳಿಗ್ಗೆ ತಿಂಡಿಯ ವ್ಯವಸ್ಥೆಯನ್ನು ಶಾಸಕ ಹರೀಶ್ ಪೂಂಜ ಅವರು ತನ್ನ ಚರ್ಚಿನಿಂದಲೇ ಮಾಡಿದ್ದರು. ಮಾತ್ರವಲ್ಲದೇ ಬೆಳಗಿನಿಂದಲೇ ಬೆಳ್ತಂಗಡಿ ಇನ್ಸ್‌ಫೆಕ್ಟರ್ ಸಂದೇಶ್ ಅವರು ಮತ್ತು ಸಿಬ್ಬಂದಿಗಳ ತಂಡ ಬಹಳ ಅಚ್ಚುಕಟ್ಟಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ರಸ್ತೆಯ ಮಣ್ಣು ತೆರವು ಕಾರ್ಯಚರಣೆಯಲ್ಲಿ ತೊಡಗಿದ್ದರು. ಹಾಗೂ ಚಿಕ್ಕ ಮಂಗಳೂರು ಎಸ್ಪಿ ಅಣ್ಣಮಲೈ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ, ಸಂಕಷ್ಟದಲ್ಲಿದ್ದ ಪ್ರಯಾಣಿಕರ ನೆರವಿಗೆ ನಿಂತಿದ್ದರು.

ಶಾಸಕರ ಮತ್ತು ಪೊಲೀಸ್ ಅಧಿಕಾರಿಗಳ ಈ ಕಾರ್ಯಕ್ಕೆ ಇದೀಗ ಸಾರ್ವಜನಿಕ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಮಾಡಬೇಕಾದ ಕೆಲಸಗಳನ್ನು ಬೆಳ್ತಂಗಡಿಯಲ್ಲಿ ನೂತನ ಶಾಸಕರು ಮಾಡುತ್ತಿದ್ದರೇ, ಇನ್ನೊಂದೆಡೆ ಒಬ್ಬ ಪೊಲೀಸ್ ಅಧಿಕಾರಿಯಾಗಿ ಏನು ಮಾಡಬೇಕು ಅದನ್ನು ಬಹಳ ಪ್ರಮಾಣಿಕವಾಗಿ ಮತ್ತು ಜನರ ಜೊತೆಗೆ ಇದ್ದುಕೊಂಡು, ಜನರ ಕಷ್ಟಗಳಿಗೆ ಸ್ಪಂದನೆ ನೀಡುತ್ತ ಬಂದಿರುವ ಎಸ್ಪಿ ಅಣ್ಣಮಲೈ ಹಾಗೂ ಇನ್ಸ್‌ಫೆಕ್ಟರ್ ಸಂದೇಶ್ ಅವರು ಈ ಮೂಲಕ ಮತ್ತೆ ಸಾರ್ವಜನಿಕರ ಮನಗೆದ್ದಿದ್ದಾರೆ.

ಕಳೆದ ರಾತ್ರಿಯಿಂದ ಸ್ಥಗಿತಗೊಂಡಿದ್ದ ಚಾರ್ಮಾಡಿ ಘಾಟ್ ಕೊನೆಗೂ ಜನ ಸಂಚಾರಕ್ಕೆ ಮುಕ್ತವಾಗಿದೆ.

error: Content is protected !!