Thursday, August 16 , 2018 7:46 PM











ಐವನ್ ಡಿಸೋಜ”ರ ರಿಕ್ಷಾ ಸೊಸೈಟಿ! ಇಲ್ಲಿ ನಿಯಮ ಮೀರಿ ಇಂಧನ ಸಾಲ ಕೋಟಿ ಕೋಟಿ!



12092

ಮಂಗಳೂರು: ರಿಕ್ಷಾ ಚಾಲಕರ ಉದ್ಧಾರ ಮಾಡುತ್ತೇನೆ ಎಂದು ಸಂಘದ ಅಧ್ಯಕ್ಷ ಹುದ್ದೆ ಗಿಟ್ಟಿಸಿಕೊಂಡ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ಈಗ ನಿಯಮಾವಳಿ ಮೀರಿ ಕೋಟಿಗಟ್ಟಲೆ ಬೆಲೆಯ ಡೀಸೇಲ್, ಪೆಟ್ರೋಲ್ ಕಡ ನೀಡಿ ಸೊಸೈಟಿಗೆ ಸಂಕಷ್ಟ ತಂದಿಟ್ಟಿದ್ದಾರೆ.

ಸಂಸ್ಥೆಯೊಂದರ ಮಾಲೀಕನಿಗೆ ೧.೮೮ ಕೋಟಿ ರೂ. ಬೆಲೆಯ ಇಂಧನ ನೀಡಿದ್ದು, ೨ ವರ್ಷಗಳಿಂದ ವಸೂಲಾಗಿಲ್ಲ. ಇದೇ ರೀತಿ ಇದೇ ಸೊಸೈಟಿಯಿಂದ ಐವನ್ ಡಿಸೋಜ ಅವರು ಕೂಡಾ ನಿಯಮ ಮೀರಿ ಪ್ರತಿ ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಹಾಕಿಸಿಕೊಂಡಿದ್ದಾರೆ. ಮ್ಯಾಕೊ ಕೊಅಪರೇಟಿವ್ ಸೊಸೈಟಿ (ಮಂಗಳೂರು ಆಟೋ ರಿಕ್ಷಾ ಮತ್ತು ಕಾರು ಚಾಲಕರ ಸಹಕಾರ ಸಂಘ ನಿಯಮಿತ) ರಿಕ್ಷಾ ಚಾಲಕರು ಮತ್ತು ಕಾರು ಚಾಲಕರ ಶ್ರೇಯೋಭಿವೃದ್ಧಿಗಾಗಿ ಸಹಕಾರ ಸಂಘ ಸ್ಥಾಪಿಸಲಾಗಿದೆ.

ಚಾಲಕರು ರಿಕ್ಷಾ, ಕಾರುಗಳಿಗೆ ಡೀಸೇಲ್ ಹಾಕಿಸಿಕೊಳ್ಳಲು ಒಂದು ತಿಂಗಳ ಅವಧಿಯಲ್ಲಿ ಬಡ್ಡಿ ಇಲ್ಲದ ಸಾಲ ನೀಡಲಾಗುತ್ತದೆ. ಸದಸ್ಯರು ಇಟ್ಟಿರುವ ಠೇವಣಿ ಹಣದ ದುಪ್ಪಟ್ಟು ಮೊತ್ತ ಮೌಲ್ಯದ ಇಂಧನ ಹಾಕಿಸಿಕೊಳ್ಳಬಹುದು. ತಿಂಗಳ ಅಂತ್ಯದಲ್ಲಿ ಮೊತ್ತ ಮರು ಪಾವತಿಸಬೇಕು. ಇದಕ್ಕೆ ಸದಸ್ಯರು ಎರಡು ಚೆಕ್‌ಗಳನ್ನು ಸಂಸ್ಥೆಗೆ ಠೇವಣಿಯಾಗಿ ನೀಡಬೇಕು. ಆದರೆ ಬಡ ರಿಕ್ಷಾ ಚಾಲಕರಿಗೆ ಈ ಎಲ್ಲ ನಿಯಮಗಳನ್ನು ಪಾಲಿಸಬೇಕು. ಸಂಸ್ಥೆಯೊಂದರ ಮಾಲೀಕನಿಗೆ ನಿಯಮ ಮೀರಿ ೧.೮೮ ಕೋಟಿ ರು. ಇಂಧನ ನೀಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಇದು ಸುದ್ದಿಯಾದರೆ ಸಂಕಷ್ಟ ಎದುರಾದೀತು ಎಂಬ ಭೀತಿಯಿಂದ ಸಾಲದ ಮೊತ್ತ ಮರುಪಾವತಿಗೆ ಸೊಸೈಟಿ ಅಧ್ಯಕ್ಷ, ಕಾರ್ಯದರ್ಶಿ ಮುಂದಾದರು. ಪೆಟ್ರೋಲ್ ಹಾಕಲು ಬರುತ್ತಿದ್ದ  ಸಂಸ್ಥೆಯೊಂದರ  ವಾಹನಗಳ ಸಂಖ್ಯೆ ಬರೆದು ಆ ವಾಹನಗಳನ್ನು ಜಫ್ತಿ ಮಾಡಲು ಅನುವು ಮಾಡಬೇಕು ಎಂದು ಸಹಕಾರ ಸಂಘದ ನಿಬಂಧಕರಲ್ಲಿ ಮನವಿ ಮಾಡಿದರು. ಅದಕ್ಕೆ ಅನುಮತಿ ಕೂಡಾ ಲಭಿಸಿತು. ಆದರೆ ವಾಹನಗಳನ್ನು ಜಫ್ತಿ ಮಾಡಿದಂತೆ ದಾಖಲೆಯಲ್ಲಿ ತೋರಿಸಿದರು. ಮುಟ್ಟುಗೋಲು ಹಾಕಿಕೊಂಡಿದ್ದರೆ ಅವರು ವಾಹನಗಳನ್ನು ಎಲ್ಲಿ ಇಟ್ಟಿದ್ದಾರೆ ಎಂದರೆ ಉತ್ತರ ನೀಡುತ್ತಿಲ್ಲ .

ಐವನ್ ಡಿಸೋಜ ಅವರು ಸೊಸೈಟಿಯಲ್ಲಿ ೧೦ ಸಾವಿರ ರು. ಠೇವಣಿ ಇರಿಸಿದ್ದಾರೆ. ನಿಯಮಾವಳಿಯಂತೆ ೨ ಚೆಕ್ ನೀಡಿ, ೨೦ ಸಾವಿರ ರು,. ಮಾತ್ರ ಪಡೆಯಬೇಕು. ಆದರೆ ೬೯ ಸಾವಿರ ರು. ಕೆಲವೊಮ್ಮೆ ಲಕ್ಷ ರು. ಹೀಗೆ ಅನೇಕ ಬಾರಿ ಇಂಧನ ಹಾಕಿಸಿಕೊಂಡಿದ್ದಾರೆ. ಪ್ರತಿ ತಿಂಗಳು ಮೊತ್ತವನ್ನು ಪಾವತಿಸಿದ್ದಾರೆ. ಆದರೆ ಇವರು ಕೂಡ ನಿಯಮ ಮೀರಿ ಸಾಲ ಪಡೆಯುತ್ತಿದ್ದಾರೆ ಎಂಬುದು ಸದಸ್ಯರ ಆರೋಪವಾಗಿದೆ.

ಮಾಮೂಲಿ ಸಾಲ : ಚಿನ್ನಾಭರಣ ಸಾಲ, ಆಟೋ ರಿಕ್ಷಾ ಅಡವು, ರಿಕ್ಷಾ, ಕಾರು ಖರೀದಿಗೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಠೇವಣಿಗೂ ಇಲ್ಲಿ ಬಡ್ಡಿ ನೀಡಲಾಗುತ್ತದೆ. ಈ ಎಲ್ಲ ಸಾಲಗಳು ಮರುಪಾವತಿಯಾಗುವ ಸಾಧ್ಯತೆ ಇದೆ. ಏಕೆಂದರೆ ಆರ‍್ಟಿಒದಲ್ಲಿ ಅಡವು ಪತ್ರ ಇರುವುದರಿಂದ ಸೊಸೈಟಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಬಡ್ಡಿ ರಹಿತವಾಗಿ ಇಂಧನ ಹಾಕಿದರೆ ಇದರ ಹಣ ಮರು ಪಾವತಿಗೆ ಕಾನೂನಿನ ತೊಡಕುಗಳು ಎದುರಾಗುತ್ತವೆ. ಈ ಕುರಿತು ಸಹಕಾರ ಸಂಘದ ನಿಬಂಧಕ ಬಿ.ಕೆ.ಸಲೀಂ ಪ್ರತಿಕ್ರಿಯಿಸಿದ್ದಾರೆ. ಬಡ್ಡಿ ನೀಡದೇ ಸಾಲ ನಿಡುವ ಪರಿಪಾಠ ಎಲ್ಲೂ ಇಲ್ಲ. ಸಂಸ್ಥೆಯು ಠೇವಣಿದಾರರಿಗೆ ಹೇಗೆ ಬಡ್ಡಿ ನೀಡಲು ಸಾಧ್ಯ. ಸಂಸ್ಥೆಯ ಸಿಬ್ಬಂದಿಗೆ ಹೇಗೆ ವೇತನ ನೀಡಲು ಸಾಧ್ಯ. ಆದರೂ ವಿಶೇಷ ನಿರ್ಣಯ ಕೈಗೊಂಡು ವಿಶೇಷ ಸಂದರ್ಭದಲ್ಲಿ ನೀಡಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಈ ಸೊಸೈಟಿಯಲ್ಲಿ ನಿಯಮ ಮೀರಿ ಅವ್ಯವಹಾರ ನಡೆದಿರುವ ಕುರಿತು ಸಂಬಂಧ ಪಟ್ಟ ಅಧಿಕಾರಿಗಳೂ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ.

error: Content is protected !!