Tuesday, May 22 , 2018 1:38 PM











ಅರಣ್ಯಾಧಿಕಾರಿಗಳ ‘ಬ್ರಿಟಿಷ್ ರೂಲ್’.! ; ಮಾವುತರ ಮಕ್ಕಳು ಖಾಸಗಿ ಶಾಲೆಗೆ ಹೋಗುವಂತಿಲ್ಲ!



1447

ಮಂಗಳೂರು : ಆನೆ ಕಾವಾಡಿಗಳು ಹಾಗೂ ಮಾವುತರ ಮಕ್ಕಳ ಶಿಕ್ಷಣ ಕುರಿತಂತೆ ಹೊರಬಿದ್ದಿರುವ ಈ ಸುತ್ತೋಲೆ ಅರಣ್ಯ ಇಲಾಖೆಯ ಉನ್ನತ ಹುದ್ದೆಯಲ್ಲಿರುವವರ ಬ್ರಿಟಿಷ್ ಕಾಲದ ಮನಸ್ಥಿತಿಯನ್ನು ಬಹಿರಂಗಗೊಳಿಸಿದೆ. ಇಷ್ಟು ದಿನ ಕಾಡಿನಲ್ಲಿ ನಡೆಯುತ್ತಿದ್ದ ಅರಣ್ಯಾಧಿಕಾರಿಗಳ ‘ಬ್ರಿಟಿಷ್ ರೂಲ್’ ಈಗ ಸುತ್ತೋಲೆಯೊಂದರ ರೂಪದಲ್ಲಿ ನಿಯಮವಾಗಿ ಜಾರಿಯಾಗಲು ಹೊರಟಿದೆ! “ಆನೆ ಕಾವಾಡಿ ಮತ್ತು ಮಾವುತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಬಾರದು” ಎಂದು ರಾಜ್ಯ ಅರಣ್ಯಪಡೆಯ ಮುಖ್ಯಸ್ಥರು ಹೊರಡಿಸಿರುವ ಆದೇಶವು ದೇಶದ ಸಂವಿಧಾನವನ್ನೇ ಅಣಕಿಸುವಂತಿದೆ. ದಸರಾ ಸಂದರ್ಭದಲ್ಲಿ ಕಾಡಿನಿಂದ ನಾಡಿಗೆ ಬರುವ ಗಜಪಡೆಗಳ ಜತೆಗೆ ಬರುವ ಕಾವಾಡಿಗಳು ಹಾಗೂ ಮಾವುತರ ಕುಟುಂಬಗಳಿಗೆ ಮೈಸೂರು ಅರಮನೆಯ ಮುಂಭಾಗದಲ್ಲೇ ಟೆಂಟ್‌ಗಳೂ, ಟೆಂಟ್ ಶಾಲೆಗಳೂ ಏಳುತ್ತವೆ. ದಸರಾ ಸಂದರ್ಭದಲ್ಲಿ ಮಾತ್ರ ನಾಡಿನ ಮುಖ ನೋಡುವ ಬಹುತೇಕ ಕಾವಾಡಿಗಳು, ಮಾವುತರು ಹಾಗೂ ಅವರ ಹೆಂಡತಿ ಮಕ್ಕಳು ಉಳಿದ ಸಮಯ ಕಳೆಯುವುದೆಲ್ಲಾ ಆನೆ ಕ್ಯಾಂಪ್‌ಗಳಲ್ಲೇ. ಕೆಲಸದ ಕಾರಣಕ್ಕೆ ಕಾವಾಡಿಗಳು ಮತ್ತು ಮಾವುತರು ಆನೆ ಕ್ಯಾಂಪ್‌ಗಳಲ್ಲಿ ಉಳಿಯುವುದು ಅನಿವಾರ್ಯ.

ಈ ಅನಿವಾರ್ಯವೇ ಈಗ ಅವರ ಮಕ್ಕಳ ಶಿಕ್ಷಣ ಕಸಿದುಕೊಳ್ಳುವಂತಾಗಿದೆ. ದಸರಾ ದಿನಗಳಲ್ಲಿ ಮಾವುತರಿಗೆ ಊಟ ಬಡಿಸಿ, ಸಿಹಿ ಹಂಚಿ ಫೋಟೊ ತೆಗೆಸಿಕೊಳ್ಳುವ ಸಚಿವರು, ಅಧಿಕಾರಿಗಳಿಗೆ ನಿಜಕ್ಕೂ ಕಾವಾಡಿಗಳು, ಮಾವುತರು ಮತ್ತು ಅವರ ಮಕ್ಕಳ ಬಗ್ಗೆ ಕಾಳಜಿ ಇದ್ದಂತಿಲ್ಲ. ಕಾಳಜಿ ಇದ್ದಿದ್ದರೆ ಇಂಥದ್ದೊಂದು ಅಮಾನವೀಯ ಆದೇಶ ಅರಣ್ಯ ಭವನದಿಂದ ಹೊರಬೀಳುತ್ತಿರಲಿಲ್ಲ. ಈ ಆದೇಶದ ಮೂಲಕ ಅರಣ್ಯ ಇಲಾಖೆಯ ಉನ್ನತ ಹುದ್ದೆಯಲ್ಲಿರುವವರ ಮನಸ್ಥಿತಿ ಎಂಥದ್ದು ಎಂಬುದು ಈಗ ಬಯಲಾಗಿದೆ. ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯಪಡೆಯ ಮುಖ್ಯಸ್ಥರು) ಮಾರ್ಚ್ ೧೫ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, “ಆನೆ ಕಾವಾಡಿ ಮತ್ತು ಆನೆ ಮಾವುತರು ತಮ್ಮ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗೇ ಸೇರಿಸಬೇಕು. ದೂರದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಸರಕಾರಿ ಕೆಲಸ ಕಾರ್ಯಗಳ ಮೇಲೆ ಹಾಗೂ ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂರಕ್ಷಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಆನೆ ಕಾವಾಡಿ ಮತ್ತು ಮಾವುತರು ತಮ್ಮ ವಾಸಸ್ಥಳದ ಸಮೀಪದ ಸರಕಾರಿ ಶಾಲೆಗಳಿಗೇ ತಮ್ಮ ಮಕ್ಕಳನ್ನು ದಾಖಲಿಸಬೇಕು” ಎಂದು ಆದೇಶಿಸಿದ್ದಾರೆ.


ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಚ್ ೧೫ರಂದು ಹೊರಡಿಸಿರುವ ಸುತ್ತೋಲೆ
ಈ ಆದೇಶದ ಪ್ರಕಾರ ಕಾಡಿನಲ್ಲಿರುವ ಕಾವಾಡಿಗಳ ಮತ್ತು ಮಾವುತರ ಮಕ್ಕಳು ಖಾಸಗಿ ಶಾಲೆಗಳಿಗೆ ದಾಖಲಾಗುವ ಸ್ವಾತಂತ್ರ್ಯವನ್ನೇ ಕಳೆದುಕೊಂಡಂತಾಗುತ್ತದೆ. ಈ ಆದೇಶವು ದೇಶದ ಸಂವಿಧಾನದ ಸಮಾನತೆಯ ಆಶಯ ಹಾಗೂ ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕಿನ ಆಶಯಕ್ಕೇ ವಿರುದ್ಧವಾಗಿದೆ. ಉನ್ನತ ಹುದ್ದೆಯಲ್ಲಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೇಶದ ಸಂವಿಧಾನದ ಕನಿಷ್ಠ ತಿಳಿವಳಿಕೆಯೂ ಇಲ್ಲದಂತೆ ಈ ಆದೇಶ ಹೊರಡಿಸಿದ್ದಾರೆ. ಸರಕಾರೇತರ ಶಾಲೆಗಳಿಗೆ ಕಾವಾಡಿ ಮತ್ತು ಮಾವುತರ ಮಕ್ಕಳನ್ನು ದಾಖಲಿಸದಂತೆ ತಡೆಯುವುದು ಮಾನವ ಹಕ್ಕುಗಳ ಉಲ್ಲಂಘನೆಯ ಜತೆಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಹೌದು. ಶಿಕ್ಷಣದ ವಿಚಾರದಲ್ಲಿ ಅಸಮಾನತೆ ಪ್ರದರ್ಶಿಸಬಾರದು ಎಂದು ಸಂವಿಧಾನ ಹೇಳುತ್ತದೆ. ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಸರಕಾರವೇ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಗೆ ತಂದಿದೆ. ಆದರೆ, ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಅರಣ್ಯ ಇಲಾಖೆಯ ಈ ಸುತ್ತೋಲೆಯು ಕಾವಾಡಿ ಮತ್ತು ಮಾವುತರಿಗೆ ಅಡ್ಡಗಾಲಾಗಿದೆ.

“ಈ ಸುತ್ತೋಲೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಅಸಮಾನತೆಯ ಪರಮಾವಧಿ. ಕಾವಾಡಿಗಳು ಮತ್ತು ಮಾವುತರ ಮಕ್ಕಳಿಗೆ ಸರಕಾರೇತರ ಶಾಲೆಗಳಲ್ಲಿ ಕಲಿಕೆಗೆ ಅವಕಾಶವನ್ನು ಸರಕಾರಿ ಅಧಿಕಾರಿಗಳೇ ನಿರಾಕರಿಸುವುದು ಮೂರ್ಖತನ. ಇದು ಪುರೋಹಿತನ ಮಗ ಪುರೋಹಿತನಾಗೇ ಇರಬೇಕು, ಕೂಲಿಯ ಮಗ ಕೂಲಿಯಾಗಿಯೇ ಇರಬೇಕು ಎಂಬ ಮನಸ್ಥಿತಿಯ ಪರಿಣಾಮ. ಕಾವಾಡಿಗಳು, ಮಾವುತರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಬೇರೆ ಕೆಲಸಗಳಿಗೆ ಹೋದರೆ ಕಾವಾಡಿ, ಮಾವುತ ಕೆಲಸ ಮಾಡುವವರು ಇಲ್ಲವಾಗುತ್ತಾರೆ ಎಂಬ ದುರಾಲೋಚನೆಯೂ ಈ ಸುತ್ತೋಲೆಯ ಹಿಂದೆ ಇರಬಹುದು. ಈ ಸುತ್ತೋಲೆ ಹೊರಡಿಸಿರುವ ಅಧಿಕಾರಿಯ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು.
– ಎನ್. ವಿ. ವಾಸುದೇವ ಶರ್ಮಾ, ಮಕ್ಕಳ ಹಕ್ಕುಗಳ ಹೋರಾಟಗಾರ”.
ಅರಣ್ಯ ಮೂಲ ನಿವಾಸಿಗಳೆಂದು ಸರಕಾರವೇ ಘೋಷಿಸಿರುವ ಜೇನು ಕುರುಬ ಸಮುದಾಯದವರೇ ರಾಜ್ಯದಲ್ಲಿ ಹೆಚ್ಚಾಗಿ ಕಾವಾಡಿ ಮತ್ತು ಮಾವುತರಾಗಿ ಕೆಲಸ ಮಾಡುತ್ತಿದ್ದಾರೆ. ಕಾವಾಡಿ ಮತ್ತು ಮಾವುತರಾಗಿ ಕೆಲಸ ಮಾಡುತ್ತಿರುವ ಬಹುತೇಕರ ಕೆಲಸವೇ ಇನ್ನೂ ಖಾಯಂ ಆಗಿಲ್ಲ. ನಾಗರಹೊಳೆ, ಬಂಡಿಪುರ ಕ್ಯಾಂಪ್‌ಗಳಲ್ಲಿರುವ ಬಹುತೇಕ ಕಾವಾಡಿ, ಮಾವುತರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರು. ಈಗಾಗಲೇ ಶಿಕ್ಷಣದಿಂದ ವಂಚಿತರಾಗಿರುವ ಕಾವಾಡಿ ಮತ್ತು ಮಾವುತರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣದಿಂದ ವಂಚಿಸುವಂತಿದೆ ಅರಣ್ಯ ಇಲಾಖೆ ಹೊರಡಿಸಿರುವ ಈ ಸುತ್ತೋಲೆ.


ಆದಿವಾಸಿಗಳ ಶಿಕ್ಷಣದ ಹಕ್ಕನ್ನು ಕಸಿಯುವ ಹುನ್ನಾರ
“ಈಗಾಗಲೇ ಮೂಲೆಗೆ ತಳ್ಳಲ್ಪಟ್ಟಿರುವ ಆದಿವಾಸಿ ಸಮುದಾಯದ ಮಕ್ಕಳ ಗುಣಮಟ್ಟದ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ತಮ್ಮ ಮಕ್ಕಳಿಗೇ ಒಂದು ಶಿಕ್ಷಣ ನೀತಿ, ಕಾವಾಡಿ, ಮಾವುತರ ಮಕ್ಕಳಿಗೇ ಒಂದು ಶಿಕ್ಷಣ ನೀತಿಯನ್ನು ಜಾರಿಗೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ಹೊರಟಿದ್ದಾರೆ. ಕಾಡಿನ ಮಧ್ಯ ಜೀವನ ನಡೆಸುವ ಕಾವಾಡಿಗಳು ಹಾಗೂ ಮಾವುತರ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೆಲವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ಮಕ್ಕಳು ಚೆನ್ನಾಗಿ ಓದಬೇಕೆಂಬ ಕನಸು ಕಂಡಿದ್ದಾರೆ. ಅರಣ್ಯ ಇಲಾಖೆಯ ಈ ಸುತ್ತೋಲೆ ಇವರ ಕನಸಿನ ಮೇಲೆ ಕೆಂಡ ಎರಚಿದಂತಾಗಿದೆ. ಈ ಸುತ್ತೋಲೆ ಹೊರಡಿಸಿರುವ ಅಧಿಕಾರಿ ವಿರುದ್ಧ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು” ಎಂಬುದು ಆದಿವಾಸಿ ಹಕ್ಕುಗಳ ಹೋರಾಟಗಾರ ಡಾ.ಸಿ. ಮಾದೇಗೌಡ ಅವರ ಆಗ್ರಹ.

“ಗಿರಿಜನ ಶಾಲೆಗಳ ಪರಿಸ್ಥಿತಿ ಸುಧಾರಿಸದ ಹೊರತು ಆದಿವಾಸಿಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಕಷ್ಟ. ಕಾವಾಡಿ ಮತ್ತು ಮಾವುತರು ಸಮೀಪದ ಸರಕಾರಿ ಶಾಲೆಗೇ ತಮ್ಮ ಮಕ್ಕಳನ್ನು ದಾಖಲಿಸಬೇಕು ಎಂದು ಅರಣ್ಯ ಇಲಾಖೆ ಆದೇಶ ಹೊರಡಿಸುವುದು ಐಎಫ್‌ಎಸ್ ಅಧಿಕಾರಿಗಳ ಬ್ರಿಟಿಷ್ ರೂಲ್ ಮತ್ತೆ ವಿಜೃಂಭಿಸುತ್ತಿರುವಂತೆ ಕಾಣುತ್ತಿದೆ. ಈ ಆದೇಶ ಜಾರಿಯಾಗಬಾರದು. ಕಾವಾಡಿ ಮತ್ತು ಮಾವುತರ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಐಎಫ್‌ಎಸ್ ಅಧಿಕಾರಿಗಳಿಗಿಲ್ಲ” ಎನ್ನುತ್ತಾರೆ ಮಾದೇಗೌಡ.

ಐಎಫ್‌ಎಸ್ ಅಧಿಕಾರಿಗಳು ಮೊದಲು ತಮ್ಮ ಮಕ್ಕಳನ್ನು ಸಮೀಪದ ಸರಕಾರಿ ಶಾಲೆಗೆ ಸೇರಿಸಲಿ. ಆ ಬಳಿಕ ಕಾವಾಡಿ ಮತ್ತು ಮಾವುತರಿಗೆ ಸರಕಾರಿ ಶಾಲೆಗೆ ಕಳಿಸುವ ಮಾತನಾಡಲಿ. ಮಾನವೀಯತೆಯನ್ನು ಮರೆತು ಅರಣ್ಯಾಧಿಕಾರಿಗಳು ಈ ರೀತಿಯ ಆದೇಶ ಹೊರಡಿಸಿದ್ದಾರೆ. ಮೊದಲೇ ಶಿಕ್ಷಣದಿಂದ ವಂಚಿತರಾಗಿರುವ ಕಾವಾಡಿ ಮತ್ತು ಮಾವುತರ ಮಕ್ಕಳ ಹಕ್ಕನ್ನೂ ಕಸಿದುಕೊಳ್ಳಲು ಅರಣ್ಯ ಇಲಾಖೆ ಈ ಆದೇಶದ ಮೂಲಕ ಮುಂದಾಗಿದೆ. ಈ ಸುತ್ತೋಲೆ ರದ್ದಾಗಬೇಕು.
– ಡಾ.ಸಿ. ಮಾದೇಗೌಡ, ಆದಿವಾಸಿ ಹಕ್ಕುಗಳ ಹೋರಾಟಗಾರ

ಕೃಪೆ : ಸಮಾಚಾರ

error: Content is protected !!