Thursday, August 16 , 2018 7:46 PMಕರಾವಳಿಯಲ್ಲಿ ತಗ್ಗಿದ ಕಡಲ್ಕೊರೆತ: ಸುರಕ್ಷಿತ ಸ್ಥಳಕ್ಕೆ 20 ಕುಟುಂಬ ಸ್ಥಳಾಂತರ193

ಮಂಗಳೂರು: ಕರಾವಳಿಯಲ್ಲಿ ಮಳೆರಾಯನ ಅಬ್ಬರ ಕೊಂಚ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮುದ್ರ ರಾಜನ ಆರ್ಭಟ ತಗ್ಗಿದೆ. ಕಳೆದ 5 ದಿನಗಳಿಂದ ಕರಾವಳಿಯ ಉದ್ದಕ್ಕೂ ಕಡಲಿನ ಅಲೆಗಳ ಹೊಡೆತ ಜೋರಾಗಿತ್ತು. ಈ ಪರಿಣಾಮ ಕರಾವಳಿಯಲ್ಲಿ ವ್ಯಾಪಕವಾಗಿ ಕಡಲ್ಕೊರೆತ ಆರಂಭವಾಗಿತ್ತು. ಆದರೆ ಕಳೆದ ರಾತ್ರಿಯಿಂದ ಮಂಗಳೂರು ಹೊರವಲಯದ ಉಳ್ಳಾಲ ಹಾಗೂ ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದ ಪ್ರಮಾಣ ಕಡಿಮೆಯಾಗಿದೆ. ಕಡಲ ಅಲೆಗಳ ಅಬ್ಬರ ಕೊಂಚ ತಗ್ಗಿದೆ. ಈ ಹಿನ್ನಲೆಯಲ್ಲಿ ಉಳ್ಳಾಲ ಪ್ರದೇಶದ ಕೈಕೊ, ಕಿಲೇರಿಯಾ ನಗರ , ಮಕ್ಕಚೇರಿ ಯಲ್ಲಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಪ್ರದೇಶದಲ್ಲಿ ಅಪಾಯದಲ್ಲಿದ್ದ 41 ಮನೆಗಳನ್ನು ಉಳ್ಳಾಲ ನಗರಸಭೆ ಗುರುತಿಸಿದ್ದು, 20 ಕುಟುಂಬಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದವರು ರಾತ್ರಿ ವೇಳೆ ಸಂಬಂಧಿಕರ ಮನೆಗಳಿಗೆ ತೆರಳಿದ್ದರು. ಸೋಮೇಶ್ವರ ಉಚ್ಚಿಲದಲ್ಲಿ ಬಟ್ಟಪ್ಪಾಡಿಯಲ್ಲಿ ಹಾಕಲಾಗಿದ್ದ ತಾತ್ಕಾಲಿಕ ತಡೆಗೋಡೆಯ ಬೃಹತ್ ಗಾತ್ರದ ಕಲ್ಲುಗಳು ಸಮುದ್ರಪಾಲಾಗುತ್ತಿವೆ.

ಈ ಪ್ರದೇಶದಲ್ಲಿ 10 ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದ್ದು, ಮತ್ತೇ ಕಡಲ್ಕೊರೆತ ಹೆಚ್ಚಾದರೆ ಈ ಮನೆಗಳು ಕಡಲ ಒಡಲು ಸೇರುವ ಆತಂಕವಿದೆ. ಈ ಕುರಿತು ಈಗಾಗಲೇ ಉಳ್ಳಾಲ ನಗರ ಸಭೆಯ ಅಧಿಕಾರಿಗಳ ಗಮನಕ್ಕೆ ತಂದರು ಇತ್ತ ಹಮನಹರಿಸುತ್ತಿಲ್ಲ ಎಂದು ಬಟ್ಟಪ್ಪಾಡಿ ನಿವಾಸಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಡಲ್ಕೊರೆತಕ್ಕೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಿನ್ನೆ 8 ಮನೆಗಳು ಧ್ವಂಸಗೊಂಡಿದ್ದವು . ಕಡಲ ಭೋರ್ಗರೆತ ಹೆಚ್ಚಾಗಿದ್ದ ಕಾರಣ ಸ್ಥಳೀಯ ನಿವಾಸಿಗಳಲ್ಲಿ ಯಾವಾಗ ಏನಾಗುತ್ತೋ ಅನ್ನೋ ಜೀವ ಭಯ ಮನೆ ಮಾಡಿತ್ತು.

 

error: Content is protected !!