Thursday, August 16 , 2018 7:47 PMಮೆಜೆಸ್ಟಿಕ್ ಮಹಿಳೆಯರ’ ಮೇಲೆ ಲಾಠಿ ಬೀಸಿದ ‘ಮಾಧ್ಯಮ ಸಿಂಗಂ’ ರವಿ ಚನ್ನಣ್ಣನವರ್!4435

ಬೆಂಗಳೂರು : ‘ಮಾಧ್ಯಮ ಸಿಂಗಂ’ ರವಿ ಚನ್ನಣ್ಣನವರ್ ಬೆಂಗಳೂರಿಗೆ ಬಂದ ಕೆಲವೇ ದಿನಗಳಲ್ಲಿ ಸುದ್ದಿ ಕೇಂದ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ‘ಸ್ವಚ್ಛ ಭಾರತ್’ ಹೆಸರಿನಲ್ಲಿ ಲೈಂಗಿಕ ಕಾರ್ಮಿಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಪೊಲೀಸರ ಅಮಾನವೀಯವಾಗಿ ವರ್ತಿಸಿದ ಘಟನೆಗೆ ಬೆಂಗಳೂರಿನ ಮೆಜಸ್ಟಿಕ್ ಸಾಕ್ಷಿಯಾಗಿದೆ. ಬುಧವಾರ ರಾತ್ರಿ ಉಪ್ಪಾರಪೇಟೆ ಪೊಲೀಸರು ೨೩ ಲೈಂಗಿಕ ಕಾರ್ಯಕರ್ತೆಯರಿಗೆ ಅಮಾನವೀಯವಾಗಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ಸಾರ್ವಜನಿಕರ ಮಧ್ಯೆಯೇ ಅವರನ್ನು ಅವಾಚ್ಯವಾಗಿ ಬೈದು, ೩ ಗಂಟೆಗಳ ಕಾಲ ಕಸ್ಟಡಿಯಲ್ಲಿರಿಸಿಕೊಂಡಿದ್ದಾರೆ. ಅಂದಹಾಗೆ, ಇಷ್ಟೆಲ್ಲಾ ನಡೆದಿದ್ದು ಇಷ್ಟು ದಿನಗಳ ಕಾಲ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸದ್ದು ಮಾಡುತ್ತಿದ್ದ ಅಧಿಕಾರಿ ರವಿ ಚನ್ನಣ್ಣನವರ್ ನೆರಳಿನಲ್ಲಿ. ಅಂದಗಾಗೆ, ಇದೇ ಮಾರ್ಚ್ ೧೫ರಂದು ರವಿ, ಪಶ್ಚಿಮ ವಿಭಾಗ ಡಿಸಿಪಿಯಾಗಿ ಅಧಿಕಾರ ದಂಡ ಸ್ವೀಕರಿಸಿದ್ದರು.

ಏನಿದು ಘಟನೆ?:
ಬುಧವಾರ ರಾತ್ರಿ ಡಿಸಿಪಿ ಚನ್ನಣ್ಣನವರ್ ನೇತೃತ್ವದಲ್ಲಿ ಉಪ್ಪಾರಪೇಟೆ ಪೊಲೀಸರು ಮೆಜೆಸ್ಟಿಕ್‌ನಲ್ಲಿರುವ ಲೈಂಗಿಕ ಕಾರ್ಮಿಕರ ವಿರುದ್ಧ ದಾಳಿ ನಡೆಸಿದ್ದಾರೆ. ಪ್ರತಿ ಬಾರಿ ಮೇಲ್ವರ್ಗದ ಅಧಿಕಾರಿಗಳು ಬದಲಾದಾಗಲೂ, ಮಸಾಜ್ ಪಾರ್ಲರ್‌ಗಳ ಮೇಲೆ, ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿಗಳಾಗುತ್ತವೆ. ಪೊಲೀಸ್ ಮೂಲಗಳ ಪ್ರಕಾರ ಹಫ್ತಾ ವಸೂಲಿ ಹೆಚ್ಚಿಸಲು ಈ ತೆರನಾದ ದಾಳಿಗಳನ್ನು ಮಾಡಲಾಗುತ್ತದೆ. ಆದರೆ ಬುಧವಾರ ನಡೆದ ದಾಳಿ ಹಫ್ತಾ ವಸೂಲಿ ಸಂಬಂಧಿತ ದಾಳಿಯಂತಿರಲಿಲ್ಲ. ಹೊಟ್ಟೆ ಪಾಡಿಗಾಗಿ ಲೈಂಗಿಕ ಕಾರ್ಮಿಕರಾಗಿ ದುಡಿಯುವ ಮಹಿಳೆಯರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮೆಜೆಸ್ಟಿಕ್ ಪ್ರದೇಶವನ್ನು ಸ್ವಚ್ಛ ಗೊಳಿಸುವುದೇ ನಮ್ಮ ಉದ್ದೇಶ ಎಂಬುದಾಗಿಯೂ ಚನ್ನಣ್ಣನವರ್ ಹೇಳಿದ್ದಾರೆ. ಸಾಮಾನ್ಯವಾಗಿ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ಮಾಡಿದಾಗ ಲೈಂಗಿಕ ಕಾರ್ಮಿಕರನ್ನು ಸಂತ್ರಸ್ತೆಯನ್ನಾಗಿ ನೋಡುವ ಪೊಲೀಸರು, ಈ ಬಾರಿ ಅಪರಾಧಿಗಳಂತೆ ನೋಡಿದ್ದಾರೆ. ಕಾಮದ ತೆವಲು ತೀರಿಸಿಕೊಳ್ಳಲು ಬರುವ ಗಿರಾಕಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿದ್ದ ಪೊಲೀಸರು, ವೇಶ್ಯೆಯರ ಮೇಲೆಯೇ ಲಾಠಿ ಬೀಸಿರುವುದು ಸಾಮಾಜಿಕ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಮೆಜೆಸ್ಟಿಕ್‌ನಲ್ಲಿ ಮಾಧ್ಯಮದ ಸಮ್ಮುಖದಲ್ಲಿಯೇ ಪೊಲೀಸರ ‘ಸ್ವಚ್ಛತಾ’ ಕಾರ್ಯ ನಡೆದಿದೆ. ಅದಾದ ನಂತರ ಒಟ್ಟೂ ೨೩ ಲೈಂಗಿಕ ಕಾರ್ಮಿಕರನ್ನು ಕೆಎಸ್‌ಆರ್‌ಟಿಸಿ ಪೊಲೀಸ್ ಔಟ್‌ಪೋಸ್ಟ್‌ಗೆ ಕರೆದೊಯ್ಯಲಾಗಿದೆ. ಲೈಂಗಿಕ ಕಾರ್ಮಿಕರನ್ನು ಕಾನೂನಾತ್ಮಕವಾಗಿ ಸಂತ್ರಸ್ತೆಯರನ್ನಾಗಿ ನೋಡಬೇಕು. ಆದರೆ ಪೊಲೀಸರು ನಡೆ ಅದಕ್ಕೆ ವಿರುದ್ಧವಾಗಿದೆ. ಮಧ್ಯರಾತ್ರಿ ಇಷ್ಟೆಲ್ಲಾ ಹೈಡ್ರಾಮಾಗಳು ನಡೆದ ನಂತರ, ವಕೀಲೆ ಬಿಂದು, ಮಹಿಳಾ ಸಾಧನ ಸಂಘದ ಮಮತ, ಮತ್ತಿತರರು ತೆರಳಿ ಪೊಲೀಸರೊಂದಿಗೆ ಮಾತನಾಡಿದ್ದಾರೆ. ಕಾನೂನಾತ್ಮಕವಾಗಿ ವೇಶ್ಯೆಯರನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂಬ ಅಂಶವನ್ನು ತಿಳಿಸಿ ಸಂತ್ರಸ್ತೆಯರನ್ನು ಪೊಲೀಸರಿಂದ ಬಿಡಿಸಿ ಕರೆದೊಯ್ದಿದ್ದಾರೆ.

“ನಿನ್ನೆ ರಾತ್ರಿ ಗೆಳತಿಯೊಬ್ಬರಿಂದ ಕರೆ ಬಂದಿತ್ತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸುಮ್ಮನೆ ನಿಂತಿದ್ದವರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಪೊಲೀಸರು ದೈಹಿಕವಾಗಿ ಹಿಂಸಿಸಿರುವುದಲ್ಲದೇ, ಜೈಲಿಗೆ ತಳ್ಳುವುದಾಗಿ ಹೆದರಿಸಿದ್ದಾರೆ. ನಿಮ್ಮನ್ನೆಲ್ಲಾ ಕಂಬಿ ಎಣಿಸುವಂತೆ ಮಾಡಿ ‘ಸ್ವಚ್ಛ ಭಾರತ’ವನ್ನು ನಿರ್ಮಿಸುತ್ತೇನೆ ಎಂದು ಡಿಸಿಪಿ ರವಿ. ಡಿ. ಚನ್ನಣ್ಣನವರ್ ಧಮಕಿ ಹಾಕಿದ್ದಾರೆ. ನಾವೆಲ್ಲರೂ ಲೈಂಗಿಕ ಕಾರ್ಮಿಕರು ಸರ್, ನಮಗೆ ಬೇರೆ ಯಾರೂ ಕೆಲಸ ನೀಡಲು ಮುಂದೆ ಬರುವುದಿಲ್ಲ. ಅನಿವಾರ್ಯವಾಗಿ ಈ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವ ಮಾತಿಗೆ ಪ್ರತಿಯಾಗಿ ನಮಗೆ ಮೆಜಸ್ಟಿಕ್ ಸ್ವಚ್ಛಗೊಳಿಸುವುದಷ್ಟೇ ಮುಖ್ಯ ಎಂಬ ಉಡಾಫೆ ಉತ್ತರ ಡಿಸಿಪಿ ನೀಡಿದರು. ಅಷ್ಟೇ ಅಲ್ಲದೇ ಯಾರ್ಯಾರ ವಿರುದ್ಧ ಯಾವ್ಯಾಯ ಕೇಸುಗಳನ್ನು ದಾಖಲಿಸುತ್ತೇನೆ ಎಂಬುದು ನನಗೇ ಗೊತ್ತಿಲ್ಲ ಎಂದು ರವಿ ಹೇಳಿದರು. ನಮ್ಮ ಸಂಘಟನೆಯ ಕೆಲವು ವ್ಯಕ್ತಿಗಳು ಮತ್ತು ವಕೀಲರು ಬಂದು ಮಾತುಕತೆ ನಡೆಸಿದ ನಂತರ ಲೈಂಗಿಕ ಕಾರ್ಮಿಕರನ್ನು ಬಿಡುಗಡೆಗೊಳಿಸಿದರು.”
ದೌರ್ಜನ್ಯಕ್ಕೆ ಒಳಪಟ್ಟ ಸಂತ್ರಸ್ಥೆಯೊಬ್ಬರ ಆಪ್ತೆ.

ಇದು ರವಿ ಚನ್ನಣ್ಣನವರ್ ಸ್ವಚ್ಚ ಭಾರತದ ನಡೆ ಮೂಡಿಸಿದ ಕಲೆ.
ಪೊಲೀಸರ ಈ ಅಮಾನವೀಯ ಕೃತ್ಯವನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ಕೆಲ ಸಂಘಟನೆಗಳು ಮುಂದಾಗಿವೆ. ಗೃಹ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಲಿರುವ ಮಹಿಳಾ ಸಾಧನ ಸಂಘದ ಸದಸ್ಯರು ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಸಂಬಂಧ ದೂರು ನೀಡಲಿದ್ದಾರೆ. ಜತೆಗೆ ಶನಿವಾರ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.

ಈ ಕುರಿತು ‘ಸಮಾಚಾರ’ ಜತೆಗೆ ಮಾತನಾಡಿದ ಡಿಸಿಪಿ ರವಿ.ಡಿ.ಚನ್ನಣ್ಣನವರ್, ಪೊಲೀಸರಿಂದ ದೌರ್ಜನ್ಯವಾಗಿದೆ ಎಂಬ ವಿಷಯವನ್ನು ಅಲ್ಲಗೆಳೆದರು. ವೇಷ್ಯಾವಾಟಿಕೆಯನ್ನು ತಡೆಯುವುದಷ್ಟೆ ನಮ್ಮ ಉದ್ದೇಶ ಎಂದರು.
ಲೈಂಗಿಕ ಕಾರ್ಮಿಕರನ್ನು ಕರೆಸಿ ತಿಳುವಳಿಕೆ ಹೇಳಲಾಗಿದೆ. ವೇಶ್ಯಾವಾಟಿಕೆ ಒಂದು ಸಾಮಾಜಿಕ ಪಿಡುಗು, ಅದನ್ನು ನಿವಾರಣೆ ಮಾಡುವ ಅಗತ್ಯವಿದೆ. ಆದರೆ ಹೀಗೆ ರಸ್ತೆಯಲ್ಲಿ ನಿಂತುಕೊಳ್ಳುವುದು ತಪ್ಪು. ಹೀಗಾಗಬಾರದು ಎನ್ನುವ ಕಾರಣಕ್ಕೆ ಅವರಿಂದ ಸಹಕಾರವನ್ನು ಕೇಳಲಾಗಿದೆ. ೨೫ ಜನ ಲೈಂಗಿಕ ಕಾರ್ಮಿಕರನ್ನೂ ಮಾತಾಡಿಸಿದ್ದೇವೆ. ಆ ವೇಳೆ ಮಾಧ್ಯಮದ ಪ್ರತಿನಿಧಿಗಳೂ ಕೂಡ ಇದ್ದರು. ಈಗ ಆ ಸಂಘಟನೆಯ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಿದ್ದೇವೆ. ಅವರೊಂದಿಗೆ ಈ ಕುರಿತು ಚರ್ಚಿಸಲಾಗುತ್ತದೆ. ಪೊಲೀಸರಿಂದ ಯಾವುದೇ ದೌರ್ಜನ್ಯ ಆಗಿಲ್ಲ. ಯಾರೋ ತಪ್ಪು ಮಾಹಿತಿ ರವಾನಿಸಿದ್ದಾರೆ. ಹೀಗೆ ತಪ್ಪು ಮಾಹಿತಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ರವಿ. ಡಿ. ಚನ್ನಣ್ಣನವರ್, ಡಿಸಿಪಿ, ಬೆಂಗಳೂರು ಪಶ್ಚಿಮ ವಿಭಾಗ

‘ಸಮಾಚಾರ’ದ ಜತೆಗೆ ಮಾತನಾಡಿದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಕಾರ್ಯಕರ್ತೆ ನಿಶಾ ಗುಳೂರು, ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಒಂದೆಡೆ ಆರೋಗ್ಯ ಇಲಾಖೆ ಲೈಂಗಿಕ ಕಾರ್ಮಿಕರಿಗೆ ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ನೀಡುತ್ತಾರೆ, ಇನ್ನೊಂದೆಡೆ ಪೊಲೀಸರು ದೌರ್ಜನ್ಯ ಮಾಡುತ್ತಾರೆ. ಪೊಲೀಸರು ತೆಗೆದುಕೊಂಡ ಕ್ರಮ ಸರಿಯಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರ. ಪೊಲೀಸರು ಮೆಜೆಸ್ಟಿಕ್ ಕ್ಲೀನ್ ಮಾಡುತ್ತೇವೆ ಎಂದರೆ ಮಹಿಳೆಯರೇನು ಗಲೀಜು ಎಂದು ಅರ್ಥವೇ? ಪೊಲೀಸರು ಇದನ್ನು ಕಾನೂನು ಬಾಹಿರ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿತವಾಗಿ ವಿರೋಧಿಸುತ್ತೇವೆ,” ಎಂದರು.

ಮುಂದುವರೆದ ಅವರು “ಒಂದು ಕಡೆ ಆರೋಗ್ಯ ಇಲಾಖೆಯ ಹಲವಾರು ಯೋಜನೆಗಳ ಮೂಲಕ ಲೈಂಗಿಕ ಕಾರ್ಮಿಕರಿಗೆ ಆರೋಗ್ಯ ಸೇವೆ ನೀಡುವ ಪ್ರಯತ್ನ ಮಾಡುತ್ತಿದೆ. ಮತ್ತೊಂದು ಕಡೆ ಗೃಹ ಇಲಾಖೆ ಅವರನ್ನು ಹಿಡಿದು ಬಡಿಯುತ್ತದೆ. ಇದು ಸರಕಾರದ ಧ್ವಂದ್ವ ನೀತಿ. ಇಂದಿನ ಸಭೆಯಲ್ಲಿ ಪೂರ್ಣವಾಗಿ ಚರ್ಚಿಸಿ ನಮ್ಮ ಮುಂದಿನ ನಡೆ ಏನು ಎನ್ನುವುದನ್ನು ನಿರ್ಧರಿಸಲಿದ್ದೇವೆ,” ಎಂದರು.

ಮೆಜೆಸ್ಟಿಕ್ ಸುತ್ತಲಿನ ಹೈಫ್ರೊಫೈಲ್ ಮಾಂಸದ ಅಡ್ಡೆ:
ಮೆಜೆಸ್ಟಿಕ್‌ನಲ್ಲಿ ರಸ್ತೆ ಬದಿಯಲ್ಲಿ ನಿಂತು ಗಿರಾಕಿಗಳಿಗಾಗಿ ಕಾಯುವ ಲೈಂಗಿಕ ಕಾರ್ಮಿಕರು ಒಂದು ಕಡೆಗಾದರೆ, ಗಂಟೆಯೊಂದಕ್ಕೆ ಸಾವಿರಾರು ರೂಪಾಯಿ ಹಣ ಕೀಳುವ ಹೈಫ್ರೊಫೈಲ್ ಮಾಂಸದ ಅಡ್ಡೆಗಳು ಮೆಜೆಸ್ಟಿಕ್ ಸುತ್ತಲೂ ಇವೆ. ಒಂದರ್ಥದಲ್ಲಿ ಮೆಜೆಸ್ಟಿಕ್ ಸುತ್ತಲಿನ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇರುವ ಬಹುತೇಕ ಹೋಟೆಲ್‌ಗಳಿಗೆ ವೇಶ್ಯಾವಾಟಿಕೆಯೇ ಆದಾಯದ ಮೂಲ. ಪಶ್ಚಿಮ ವಿಭಾಗ ಪೊಲೀಸ್ ವ್ಯಾಪ್ತಿಯ ಉಪ್ಪಾರಪೇಟೆ, ಕಾಟನ್ ಪೇಟೆ ಭಾಗಗಳಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಅದರಲ್ಲಿ ಪೊಲೀಸರೂ ಪಾಲುದಾರರು. ಪೊಲೀಸರಿಗೆ ತಿಂಗಳಿಗಿಷ್ಟು ಎಂಬಂತೆ ‘ಮಾಮೂಲು’ ಹೋಗುತ್ತದೆ. ಆಗೊಂದು ಈಗೊಂದು ದಾಳಿಗಳನ್ನು ಪೊಲೀಸರು ಮಾಡುತ್ತಾರೆ. ಇಲ್ಲದಿದ್ದರೆ, ಪೊಲೀಸರಿಗೆ ಗೊತ್ತಿದ್ದೂ ಸುಮ್ಮನಿರುತ್ತಾರೆ ಎಂಬುದು ಹಳೆಯ ಆರೋಪ. ಇದು ಎಷ್ಟೋ ಪ್ರಕರಣಗಳಲ್ಲಿ ಸಾಭೀತಾಗಿದೆ ಕೂಡ. ಸುಮಾರು ೩,೦೦೦ ರೂ. ಇಂದ ೩೦,೦೦೦ ಸಾವಿರ ರೂಪಾಯಿಗಳವರೆಗೂ ಒಂದು ರಾತ್ರಿಗೆ ರೇಟ್ ಕಟ್ಟಲಾಗುತ್ತದೆ. ಪಶ್ಚಿಮ ಬಂಗಾಳ, ಒರಿಸ್ಸಾ, ಉತ್ತರ ಪ್ರದೇಶ್, ಮಹಾರಾಷ್ಟ್ರ, ಬಿಹಾರ್ ಮತ್ತಿತರ ರಾಜ್ಯಗಳಿಂದ ಹುಡುಗಿಯರನ್ನು ಕರೆಸುವ ದೊಡ್ಡ ದಂಧೆಯೇ ಇದೆ. ಇದರಲ್ಲಿ ಎಷ್ಟೋ ಮಹಿಳೆಯರು ಸುಲಭ ಹಣ ಗಳಿಸಲು ಬಂದರೆ, ಹೆಚ್ಚಿನ ಮಂದಿ ಮಾನವ ಕಳ್ಳ ಸಾಗಾಣಿಕೆ ಜಾಲದ ಬಲಿಪಶುಗಳು. ಗಂಟೆಗಳಿಗೆ ಬರುವ ಸಾವಿರಾರು ರೂಪಾಯಿಯಲ್ಲಿ ಬಿಡಿಗಾಸು ಮಾತ್ರ ಇವರ ಪಾಲಾಗುತ್ತದೆ. ಮಿಕ್ಕೆಲ್ಲವೂ ‘ಪಿಂಪ್’ಗಳ ಕೈಸೇರುತ್ತದೆ. ಇಲ್ಲಿಗೆ ಬರುವ ಗಿರಾಕಿಗಳೆಲ್ಲರೂ ಲಕ್ಷಾಧೀಶರು ಮತ್ತು ಮಧ್ಯಮ ವರ್ಗದವರು. ಗಿರಾಕಿಗಳನ್ನು ಹಿಡಿಯಲು ಇವರೇನು ರಸ್ತೆ ಬದಿಯಲ್ಲಿ ಮಹಿಳೆಯರನ್ನು ನಿಲ್ಲಿಸುವುದಿಲ್ಲ, ಬದಲಿಗೆ ಮೊಬೈಲ್ ಆಪ್‌ಗಳ ಮತ್ತು ಜಾಲತಾಣಗಳ ಮೊರೆ ಹೋಗುತ್ತಾರೆ. ಲೊಕ್ಯಾಂಟೋ, ಟಿಂಡರ್ ಮತ್ತಿತರ ಆಪ್‌ಗಳಲ್ಲಿ ಮಧ್ಯವರ್ತಿಯ ಮೊಬೈಲ್ ಸಂಖ್ಯೆ ಮತ್ತು ಮಹಿಳೆಯ ಭಾವಚಿತ್ರಗಳನ್ನು ಹಾಕಿ ರಾಜಾರೋಷವಾಗಿಯೇ ದಂಧೆ ನಡೆಸುತ್ತಾರೆ. ಇದಿಷ್ಟು ಬೆಂಗಳೂರಿಗೆ ಹೊಸತಾಗಿ ಬಂದು ಅಧಿಕಾರ ಸ್ವೀಕರಿಸಿದ ಜನಪ್ರಿಯ ಅಧಿಕಾರಿ ರವಿ ಅವರ ಗಮನಕ್ಕೆ. ರವಿ ಡಿ. ಚೆನ್ನಣ್ಣನವರ್ ‘ಸ್ವಚ್ಚ ಭಾರತ್ ಅಭಿಯಾನ’ ಆರಂಭಿಸಬೇಕಿರುವುದು ಮೆಜೆಸ್ಟಿಕ್‌ನಿಂದ ಅಲ್ಲ, ಬದಲಿಗೆ ತಮ್ಮದೇ ವ್ಯಾಪ್ತಿಯಲ್ಲಿರುವ ಹೈಪ್ರೊಫೈಲ್ ವೇಶ್ಯಾವಾಟಿಕೆ ನಡೆಸುವ ಹೋಟೆಲ್‌ಗಳ ಮೂಲಕ. ಆಮೇಲೂ ಆಸಕ್ತಿ ಉಳಿದುಕೊಂಡಿದ್ದರೆ, ಲೊಕ್ಯಾಂಟೋದಂತಹ ಜಾಲತಾಣಗಳ ಬೆನ್ನಿಗೆ ಬಿದ್ದು, ಇನ್ನೊಂದಿಷ್ಟು ಕ್ಲೀನಿಂಗ್ ಕೆಲಸವನ್ನು ಅವರ ಮಾಡಬಹುದಾಗಿದೆ.

ಕೃಪೆ : ಸಮಾಚಾರ

error: Content is protected !!