Sunday, September 23 , 2018 11:41 PM‘ನಮ್ಮ ಬೆಂಗಳೂರು ಫೌಂಡೇಶನ್’ನ ಪ್ರಶಸ್ತಿ, ಪುರಸ್ಕಾರ, ದೊಡ್ಡ ಮೊತ್ತದ ಹಣ ಎಲ್ಲವನ್ನೂ ತಿರಸ್ಕರಿಸಿ, ಹಣಕ್ಕಿಂತ ಕರ್ತವ್ಯ ಮುಖ್ಯ ಎಂದ ಐಜಿಪಿ ರೂಪಾ ಮೌದ್ಗಿಲ್.!2654

ಬೆಂಗಳೂರು : ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಪ್ರತಿ ವರ್ಷ ನೀಡುವ ಪ್ರಶಸ್ತಿಯನ್ನು ನಿರಾಕರಿಸಿ ಬಹಿರಂಗ ಪತ್ರ ಬರೆದಿದ್ದಾರೆ ಐಜಿಪಿ ರೂಪಾ ಮೌದ್ಗಿಲ್. ದೊಡ್ಡ ಮೊತ್ತದ ಹಣವನ್ನು ಪ್ರಶಸ್ತಿ ಜತೆ ನೀಡುತ್ತಿರುವುದು ಇದಕ್ಕೆ ಕಾರಣ. ಕಳೆದ ವಾರಾಂತ್ಯದಲ್ಲಿ ಪತ್ರಕರ್ತರ ವಾಟ್ಸಾಪ್‌ಗಳಿಗೆ ಪಲುಪಿದ ಪತ್ರ ಇದು. ಒಂದಿಲ್ಲೊಂದು ಕಾರಣಗಳಿಗಾಗಿ ಸದಾ ಸುದ್ದಿಕೇಂದ್ರದಲ್ಲಿರುವ ಅಧಿಕಾರಿ ರೂಪ ಡಿ. ಮೌದ್ಗಿಲ್ ಈ ಬಾರಿ ದೊಡ್ಡ ಮೊತ್ತದ ಪ್ರಶಸ್ತಿಯನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ‘ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯಾಗಿ ರಾಜಕೀಯ ಪ್ರೇರಿತ ಸಂಘ ಸಂಸ್ಥೆಗಳಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವ’ ಅಗತ್ಯವನ್ನೂ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಇಷ್ಟಕ್ಕೂ ರೂಪ ಅವರಿಗೆ ಪ್ರಶಸ್ತಿ ರೂಪದಲ್ಲಿ ‘ಹೆವಿ ಕ್ಯಾಶ್ ರಿವಾರ್ಡ್’ ನೀಡಲು ಮುಂದೆ ಬಂದ ಸಂಸ್ಥೆ ’ನಮ್ಮ ಬೆಂಗಳೂರು’ ಫೌಂಡೇಶನ್.

ಇದರ ಹಿನ್ನೆಲೆಯನ್ನು ಹುಡುಕಿಕೊಂಡು ಹೊರಟರೆ ಕುತೂಹಲಕಾರಿ ಸಂಗತಿಗಳು, ಕೇರಳದಿಂದ ಬಂದು ಬೆಂಗಳೂರಿನಲ್ಲಿ ಸಾಮ್ರಾಜ್ಯ ಸ್ಥಾಪಿಸಿ, ರಾಜ್ಯ ಸಭೆಯಲ್ಲಿ ಕನ್ನಡಿಗರನ್ನು ಪ್ರತಿನಿಧಿಸುತ್ತಿರುವ ರಾಜೀವ್ ಚಂದ್ರಶೇಖರ್ ಎಂಬ ಉದ್ಯಮಿಯ ವೃತ್ತಾಂತಗಳು ತೆರೆದುಕೊಳ್ಳುತ್ತವೆ. ‘ನಮ್ಮ ಬೆಂಗಳೂರು ಫೌಂಡೇಶನ್’ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸರಕಾರೇತರ ಸಂಸ್ಥೆ ಎಂದು ಹೇಳಿಕೊಳ್ಳುತ್ತದೆ. ಕಳೆದ ೯ ವರ್ಷಗಳಿಂದ ಬೆಂಗಳೂರಿನ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳನ್ನು ಗುರುತಿಸಿ, ಪುರಸ್ಕರಿಸಿಕೊಂಡು ಬರುತ್ತಿದೆ. ಈ ಸಂಸ್ಥೆಯ ಹಿಂದೆ ಇರುವುದು ಇತ್ತೀಚೆಗಷ್ಟೆ- ಮೂರನೇ ಬಾರಿಗೆ- ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ರಾಜೀವ್ ಚಂದ್ರಶೇಖರ್ ಎಂಬ ಉದ್ಯಮಿ ಕಮ್ ಕರ್ನಾಟಕ ನಿವಾಸಿ ಕೇರಳ ಮೂಲದ ರಾಜಕಾರಣಿ.

ಯಾರು ಈ ರಾಜೀವ್ ಚಂದ್ರಶೇಖರ್?:
ರಾಜೀವ್ ಚಂದ್ರಶೇಖರ್ ಹಿನ್ನೆಲೆಯನ್ನು ನೋಡಿದರೆ, ಉದ್ಯಮಿಯಾಗಿದ್ದಾತ, ಸುದ್ದಿ ಮಾಧ್ಯಮಗಳ ಮಾಲೀಕನಾಗಿ ನಂತರ ರಾಜಕಾರಣಿಯಾಗಿ ರೂಪುಗೊಂಡ ಕತೆ ತೆರೆದುಕೊಳ್ಳುತ್ತದೆ. ರಾಜೀವ್ ಚಂದ್ರಶೇಖರ್ ಹುಟ್ಟಿದ್ದು ಗುಜರಾತಿನ ಅಹಮದಾಬಾದ್‌ನಲ್ಲಿ; ೧೯೬೪ರ ಮೇ ೩೧ರಂದು. ರಾಜೀವ್ ತಂದೆ ಚಂದ್ರಶೇಖರ್ ವಾಯುನೆಲೆಯಲ್ಲಿ ಕೆಲಸ ನಿರ್ವಹಿಸಿದ್ದವರು. ಮಣಿಪಾಲ್ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದ ರಾಜೀವ್ ಚಿಕಾಗೋನಲ್ಲಿ ಉನ್ನತ ಶಿಕ್ಷಣವನ್ನು ಮುಂದುವರೆಸಿದ್ದರು. ೧೯೮೧ರಲ್ಲಿ ವೃತ್ತಿ ಜೀವನ ಆರಂಭಿಸಿದ ರಾಜೀವ್ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ೧೯೮೫ರಿಂದ ೧೯೯೧ರವರೆಗೂ ಇಂಟೆಲ್ ಕಂಪನಿಯ ಉದ್ಯೋಗಿಯಾಗಿ ಅಮೆರಿಕಾದಲ್ಲಿದ್ದರು. ೧೯೯೪ರಲ್ಲಿ ಬಿಪಿಎಲ್ ಮೊಬೈಲ್ ಕಂಪನಿಯನ್ನು ರಾಜೀವ್ ಆರಂಭಿಸಿದ್ದರು. ಬಿಪಿಎಲ್ ಸಂಸ್ಥೆ ವಿರುದ್ಧ ಭೂ ಅಕ್ರಮ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದವು. ೨೦೦೫ರಲ್ಲಿ ಜುಪಿಟರ್ ಕ್ಯಾಪಿಟಲ್ ಎಂಬ ಸಂಸ್ಥೆಗೆ ಅಡಿಪಾಯ ಹಾಕಿದ್ದ ರಾಜೀವ್ ಅಲ್ಲೀಂದೀಚೆಗೆ ಮಾಧ್ಯಮ ವಲಯದಲ್ಲಿಯೂ ಚಾಲ್ತಿಯಲ್ಲಿದ್ದಾರೆ. ೨೦೦೬ರಲ್ಲಿ ಕರ್ನಾಟದಿಂದ ರಾಜ್ಯಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಮೊದಲ ಬಾರಿಗೇ ಅವರು ಜಯಗಳಿಸುವ ಮೂಲಕ ರಾಜಕಾರಣಿಯಾದರು. ಅವರೇ ಹೇಳಿಕೊಳ್ಳುವ ಪ್ರಕಾರ, ಅಲ್ಲೀಂದೀಚೆಗೆ ರಾಜೀವ್ ಚಂದ್ರಶೇಖರ್, ಎಂಪಿಯಾದರು.

೨೦೧೨ರಲ್ಲಿ ಮತ್ತೆ ಚುನಾವಣೆಗೆ ನಿಂತು ಬಿಜೆಪಿ ಮತ್ತು ಜೆಡಿಎಸ್ ಬೆಂಬಲದಿಂದ ರಾಜ್ಯಸಭಾ ಸದಸ್ಯರಾಗಿದ್ದರು. ಇತ್ತೀಚಿಗೆ ರಾಜೀವ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಕೆಲವು ದಿನಗಳ ಹಿಂದೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭಾಗವಹಿಸಿ ಮೇಲ್ಮನೆಗೆ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ರಾಜೀವ್ ಕೇರಳದ ಎನ್‌ಡಿಎ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನೂ ಕೂಡ ವಹಿಸಿದ್ದರು. ಕನ್ನಡ ಮೂಲದವರಲ್ಲದ ಕಾರಣ ರಾಜೀವ್ ರಾಜ್ಯಸಭಾ ಚುನಾವಣೆಗೆ ನಿಂತಾಗ ಹಲವಾರು ಆಕ್ಷೇಪಗಳು ಕೇಳಿ ಬಂದಿದ್ದವು. ಆದರೆ ರಾಜೀವ್ ಬಿಜೆಪಿ ಸೇರಿದ ಬಳಿಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜೀವ್‌ರನ್ನು ಸಮರ್ಥಿಸಿಕೊಂಡಿದ್ದರು. ಹಲವಾರು ಸುದ್ಧಿ ಸಂಸ್ಥೆಗಳಲ್ಲಿ ಬಂಡವಾಳ ಹೂಡಿರುವ ರಾಜೀವ್, ಸುದ್ದಿ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಅದು ಹೊಂದಿರುವ ವೀಕ್ಷಕರ, ಓದುಗರ ಬಳಗದ ಗಾತ್ರದ ಮೇಲೆ ಅಳೆಯುತ್ತಾರೆ. ಜನತೆಗೆ ನ್ಯಾಯಯುತವಾದ ಸುದ್ದಿಯನ್ನು ನೀಡಬೇಕೆಂಬ ಯಾವುದೇ ಇರಾದೆ ಇದ್ದಂತೆ ಕಾಣಿಸುವುದಿಲ್ಲ. ಉದ್ಯಮಿಯಾಗಿ ಬೆಳಕಿಗೆ ಬಂದ ರಾಜೀವ್ ದೃಷ್ಟಿಯಲ್ಲಿ ಸುದ್ದಿಯೂ ಒಂದು ಲಾಭವನ್ನು ಉತ್ಪಾದಿಸುವ ವಸ್ತು ಅಷ್ಟೇ. ಯಾವ ಕಡೆ ಹೆಚ್ಚು ಲಾಭ ಸಿಗುತ್ತದೋ ಅವರಿಗೆ ಜೈ ಅನ್ನುವ ಮನೋಭಾದ ಅವರದ್ದು. ಇದಕ್ಕೆ ಪೂರಕ ಎಂಬಂತೆ, ಸ್ಕ್ರಾಲ್ ಡಾಟ್ ಇನ್ ನಡೆಸಿರುವ ಸಂದರ್ಶನದಲ್ಲಿ ರಾಜೀವ್ ಚಂದ್ರಶೇಖರ್, “ಏಷ್ಯಾನೆಟ್ ಎಡಪಂಥೀಯದಂತೆ ಕಾಣಿಸುತ್ತದೆ. ರಿಪಬ್ಲಿಕ್ ಟಿವಿ ಬಿಜೆಪಿ ಪರವಾದ ಮಾಧ್ಯಮದಂತೆ ಗೋಚರಿಸುತ್ತದೆ. ಇನ್ನೂ ಹಲವು ಮಾಧ್ಯಮಗಳು ಅವುಗಳದ್ದೇ ಆದ ದೃಷ್ಟಿಕೋನವನ್ನು ಹೊಂದಿವೆ. ಈ ದೃಷ್ಟಿಕೋನಗಳು ಸುದ್ದಿ ಸಂಸ್ಥೆಗಳ ಸಂಪಾದಕರ ನಿಲುವಿನ ಮೇಲೆ ಆಧಾರಿತವಾಗಿರುವಂತವು. ಈ ಪ್ರಶ್ನೆಯನ್ನು ಅವರ ಬಳಿ ಕೇಳಬೇಕೆ ಹೊರತು ಬಂಡವಾಳ ಹೂಡಿದವರ ಬಳಿಯಲ್ಲ,” ಎಂದಿದ್ದರು.

ಸುದ್ದಿಗಳನ್ನು ನೀಡಿ, ವೀಕ್ಷಕ/ಓದುಗರ ಬಳಗವನ್ನು ದೊಡ್ಡದಾಗಿಸಿಕೊಂಡು ಬ್ರಾಂಡ್ ಸೃಷ್ಟಿಸುವುದಷ್ಟೇ ಅವರಿಗೆ ಮುಖ್ಯ. ಜಾಹಿರಾತುದಾರರಿಗೆ ಬೇಕಿರುವುದೂ ಕೂಡ ಬ್ರಾಂಡ್ ಅಷ್ಟೇ ಹೊರತು ಸುದ್ದಿ ಮಾಧ್ಯಮದ ನೈಜ ವಿಶ್ವಾಸಾರ್ಹತೆಯಲ್ಲ ಎಂದು ಅವರು ನಂಬಿದಂತಿದೆ. ೨೦೧೬ರ ಆಗಸ್ಟ್ ೧೫ರಂದು ರಾಜೀವ್ ಮಾಲೀಕತ್ವದ ಸುವರ್ಣ ನ್ಯೂಸ್‌ನಲ್ಲಿ ‘ಆಜಾದಿ v/s ಸ್ವಾತಂತ್ರ’ ಎಂಬ ಅಸಂಬದ್ಧ ಶೀರ್ಷಿಕೆಯ ಕಾರ್ಯಕ್ರಮವೊಂದು ಪ್ರಸಾರವಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಅನುಯಾಯಿಗಳನ್ನು ರಾಷ್ಟ್ರಭಕ್ತರು ಎಂದು, ಎಡ ಪಂಥೀಯ ವಿಚಾರವಾದಿಗಳನ್ನು ದೇಶದ್ರೋಹಿಗಳು ಎಂದೂ ಬಿಂಬಿಸುವ ವ್ಯವಸ್ಥಿತ ಪ್ರಯತ್ನವನ್ನು ಸುದ್ದಿ ಸಂಸ್ಥೆ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚೇತನಾ ತೀರ್ಥಹಳ್ಳಿ ಮತ್ತು ನೂರ್ ಶ್ರೀಧರ್ ತಾವು ಮಾತನಾಡಿದ್ದೇನು, ಆದರೆ ಸುವರ್ಣ ನ್ಯೂಸ್ ಜನರಿಗೆ ತೋರಿಸಿದ್ದೇನು ಎಂಬುದನ್ನು ಸವಿವರವಾಗಿ ಬರೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ತದ ನಂತರ ಸುವರ್ಣ ನ್ಯೂಸ್ ವ್ಯಾಪಕ ಟೀಕೆಗೂ ಗುರಿಯಾಗಿತ್ತು. ರಾಜೀವ್ ಬಂಡವಾಳ ಹೂಡಿರುವ ಮತ್ತೊಬ್ಬ ಪ್ರಮುಖ ಪತ್ರಕರ್ತನ ಹೆಸರು ಅರ್ನಬ್ ಗೋಸ್ವಾಮಿ. ಬಿಜೆಪಿಯ ಮೀಡಿಯಾ ಪ್ರಚಾರಕ ಎಂದೆ ಕರೆಸಿಕೊಂಡಿರುವ ರಿಪಬ್ಲಿಕ್ ಟಿವಿಯ ಅರ್ನಬ್, ಕಳೆದ ವರ್ಷ ಸೆಪ್ಟೆಂಬರ್ ಅವಧಿಯಲ್ಲಿ ತಾನೂ ಕೂಡ ೨೦೦೨ರಲ್ಲಿ ಗುಜರಾತ್ ಗಲಭೆಯ ವರದಿ ಮಾಡಿದ್ದೆ ಎಂದಿದ್ದರು. ಈ ಗಲಭೆಯನ್ನು ನಾನು ಕಣ್ಣಾರೆ ನೋಡಿದ್ದೆ ಮತ್ತು ತಳ ಮಟ್ಟದ ಸುದ್ದಿಯನ್ನೂ ನೀಡಿದ್ದೆ ಎಂದಿದ್ದ ಅರ್ನಬ್ ಮಾತು ಬರೀ ಬೊಗಳೆ ಎಂಬುದು ಅತನ ಸಹೋದ್ಯೋಗಿಯೊಬ್ಬರಿಂದ ಬಯಲಿಗೆ ಬಂದಿತ್ತು. ಅರ್ನಬ್ ಆ ಸಮಯದಲ್ಲಿ ಜಾಲತಾಣಗಳಲ್ಲಿ ಹಾಸ್ಯಾಸ್ಪದ ವ್ಯಕ್ತಿ ಎಂಬಂತೆ ಬಿಂಬಿತವಾಗಿದ್ದರು. ಈತ ಸ್ಥಾಪಿಸಿದ ರಿಪಬ್ಲಿಕ್ ಟಿವಿಗೆ ಬಂಡವಾಳ ಹೂಡಿದ್ದು ಇದೇ ರಾಜೀವ್ ಚಂದ್ರಶೇಖರ್.

ರಾಜೀವ್‌ರ ಈ ಸುದ್ದಿ ಮಾಧ್ಯಮಗಳು ಭಾರತೀಯ ಜನತಾ ಪಾರ್ಟಿಯ ಹೊಗಳು ಭಟರಾಗಿವೆಯೇ ಎಂಬ ಚರ್ಚೆಯೂ ಇದೆ. ಗೋಸ್ವಾಮಿಯ ರಿಪಬ್ಲಿಕ್ ಟಿವಿ ಪ್ರಾರಂಭಗೊಂಡಾಗ ಮುನ್ನೆಲೆಗೆ ಬಂದ ವಿಷಯವಿದು. ಜವಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯ ಸುದ್ದಿ ಕೇಂದ್ರಕ್ಕೆ ಬಂದಾಗಲೆಲ್ಲಾ, ಅಲ್ಲಿನ ವಿದ್ಯಾರ್ಥಿಗಳನ್ನು ರಾಷ್ಟ್ರದ್ರೋಹಿಗಳಾಗಿ ಬಿಂಬಿಸುವ ಕಾರ್ಯಕ್ಕೆ ನಿಲ್ಲುವ ಈ ಸುದ್ದಿ ವಾಹಿನಿಗಳು ಇಂತದ್ದೊಂದು ಅಪಕೀರ್ತಿಯನ್ನು ಹೊತ್ತು ನಿಂತಿವೆ. ಸಾಮಾನ್ಯವಾಗಿ ಎಡಪಂಥೀಯ ನಿಲುವಿನಲ್ಲಿ ಸುದ್ದಿ ಮಾಡುವ ಏಷ್ಯಾನೆಟ್ ನ್ಯೂಸ್, ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್‌ನ ಋಣದೊಳಗೆ ಬಿದ್ದಿದೆಯೇ ಎಂಬ ಬಗ್ಗೆ ಕೇರಳದಲ್ಲಿ ದೊಡ್ಡಮಟ್ಟದ ಚರ್ಚೆ ಹಿಂದೆ ನಡೆದಿತ್ತು. ೨೦೦೬ರ ಅವಧಿಯಲ್ಲಿ ರಾಜೀವ್ ಚಂದ್ರಶೇಖರ್‌ಗ ಮಿಂಚಂಚೆಯೊಂದು ಸುದ್ದಿ ಕೇಂದ್ರಕ್ಕೆ ಬಂದಿತ್ತು. ನ್ಯೂಸ್‌ಲ್ಯಾಂಡ್ರಿ ಈ ಕುರಿತಂತೆ ಮೊದಲು ವರದಿ ಮಾಡಿತ್ತು. ನ್ಯೂಸ್ ಲ್ಯಾಂಡ್ರಿ ಹೇಳುವಂತೆ, ರಾಜೀವ್ ಚಂದ್ರಶೇಖರ್ ತಾವು ಬಂಡವಾಳ ಹೂಡಿರುವ ಸುದ್ದಿ ಮಾಧ್ಯಮಗಳ ಸಂಪಾದಕರಿಗೆ ಈ ಮೇಲ್‌ಅನ್ನು ಕಳಿಸಿದ್ದರು. ಎಲ್ಲಾ ಸಂಪಾದಕರು ಬಲಪಂಥೀಯ ನೆಲೆಗಟ್ಟಿನ ಸುದ್ದಿಗಳನ್ನು ಪ್ರಕಟಿಸಿಬೇಕು. ಸೈನಿಕ ಕಾರ್ಯಾಚರಣೆಯನ್ನು ಮುನ್ನೆಲೆಗೆ ತರಬೇಕು. ಸುದ್ದಿ ಮಾಧ್ಯಮಗಳು ನೈಜ ಸುದ್ದಿಯ ಬದಲಿಗೆ ಮಾಲೀಕನ ಸಿದ್ಧಾಂತಗಳಿಗೆ ಅನುಗುಣವಾಗಿ ಸುದ್ದಿ ಪ್ರಕಟಿಸಬೇಕು ಎಂಬ ಭಾವಾರ್ಥವನ್ನು ಈ ಮಿಂಚಂಚೆ ಹೊಂದಿತ್ತು.

ಭೂ ಅಕ್ರಮಗಳ ಸರಣಿ:
೨೦೧೭ರ ನವೆಂಬರ್ ತಿಂಗಳಲ್ಲಿ ರಾಜೀವ್ ಚಂದ್ರಶೇಖರ್ ಮೇಲೆ ಭೂ ಒತ್ತುವರಿಯ ಆರೋಪ ಕೇಳಿ ಬಂದಿತ್ತು. ಕೇರಳದ ಕೊಟ್ಟಯಂ ಜಿಲ್ಲೆಯ ಕಮರಕುಮ ಎನ್ನುವ ಪ್ರದೇಶದಲ್ಲಿ ಸರಕಾರಿ ಜಾಗವನ್ನು ರಾಜೀವ್ ಒತ್ತುವರಿ ಮಾಡಿಕೊಂಡು ರೆಸಾರ್ಟ್ ನಿರ್ಮಿಸಿದ್ದರು ಎನ್ನಲಾಗಿತ್ತು. ಕಂದಾಯ ಇಲಾಖೆ ಈ ಒತ್ತುವರಿಯನ್ನು ದೃಪಡಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿಷ್ಣು ನಂಬೂದರಿ, ರೆಸಾರ್ಟ್ ಕೆಡವುವಂತೆ ನೋಟಿಸ್ ಜಾರಿ ಮಾಡಿದ್ದರು. ಇತ್ತಿಚಿಗೆ ರಾಜೀವ್ ಚಂದ್ರಶೇಖರ್ ಮುಖ್ಯಮಂತ್ರಿ ಸಿದ್ಧರಾಮಯ್ಯರ ಕಾಲು ಎಳೆಯಲು ಹೋಗಿ, ತಾವೇ ಪೇಚಿಗೆ ಸಿಲುಕಿದ್ದರು. ಕಾಂಗ್ರೆಸ್ ಐಟಿ ಸೆಲ್‌ನ ಮುಖ್ಯಸ್ಥೆ ರಮ್ಯ ಮಾಡಿದ್ದ ಟ್ವಿಟ್ ರಾಜೀವ್ ಬಾಯಿ ಮುಚ್ಚಿಸಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಉದ್ದೇಶಿಸಿ ಜನಲೋಕ ಪಾಲ್, ನ್ಯಾಯಮೂರ್ತಿ ಲೋಯಾ ಪ್ರಕರಣ ಸೇರಿದಂತೆ ಇನ್ನಿತರ ಪ್ರಶ್ನೆಗಳಿಗೆ ಉತ್ತರಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಒಂದು ದಾಖಲಾಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ರಾಜೀವ್, ವಿವರವಾಗಿ ಚರ್ಚಿಸೋಣ ಎಂದು ಟ್ವಿಟ್ಟರ್‌ನಲ್ಲೆಯೇ ಪ್ರತಿಕ್ರಿಯೆ ನೀಡಿದ್ದರು. ರಾಜೀವ್ ಚಂದ್ರಶೇಖರ್ ಟ್ಟೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ರಮ್ಯಾ, ‘ಇಲ್ಲಿ ಸಂಪೂರ್ಣ ಪಟ್ಟಿ ಇದೆ. ಇದಕ್ಕೆ ನಿಮ್ಮಿಂದ ಉತ್ತರ ಬೇಕಾಗಿದೆ,’ ಎಂದು ಟ್ಟೀಟ್ ಮಾಡಿದ್ದರು. ಇದರಲ್ಲಿ ರಮ್ಯಾ ನಾಲ್ಕು ಅಂಶಗಳನ್ನು ಉಲ್ಲೇಖಿಸಿದ್ದರು.

೧. ಕೆಎಂಎಫ್ ಗೆ ಕೋರಮಂಗಲದಲ್ಲಿ ಹಂಚಿಕೆ ಮಾಡಿದ ಭೂಮಿ, ೨. ಹಾಸನದಲ್ಲಿ ಹಂಚಿಕೆ ಮಾಡಿದ ಎಸ್‌ಇಝಡ್ ಜಮೀನು, ೩. ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಹಂಚಿಕೆಯಾದ ೭೫ ಎಕರೆ ಭೂಮಿ, ೪. ದಾಬಸ್ ಪೇಟೆಯಲ್ಲಿ ಘಟಕ ಸ್ಥಾಪಿಸಲು ಕೆಐಎಡಿಬಿಯಿಂದ ವಶಕ್ಕೆ ಪಡೆದುಕೊಂಡ ಜಾಗ, ಇವು ರಮ್ಯಾ ಉಲ್ಲೇಖಿಸಿದ್ದ ಅಂಶಗಳು. ಈ ಟ್ವಿಟ್‌ಗೆ ರಾಜೀವ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮರುಮಾತಾಡದೇ ಸುಮ್ಮನಿದ್ದಾರೆ ಎಂದರೆ ರಾಜೀವ್ ಇವುಗಳಲ್ಲಿ ಭಾಗಿಯಾಗಿರಬೇಕಲ್ಲವೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿತ್ತು. ಇತ್ತೀಚಿಗಷ್ಟೇ ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ್, ರಾಜೀವ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ದೂರು ಸಲ್ಲಿಸಿದ್ದರು. ಕರ್ನಾಟಕ ಹಾಲು ಒಕ್ಕೂಟಕ್ಕೆ ಸಂಬಂಧಿಸಿದ ವಾಣಿಜ್ಯ ಸಂಕೀರ್ಣದ ಹಗರಣ, ಕೆಎಮ್‌ಎಫ್ ಭೂ ಹಗರಣಗಳಲ್ಲಿ ರಾಜೀವ್ ಪಾತ್ರವಿದೆ ಎಂದು ಹಿರೇಮಠ್ ದೂರಿದ್ದರು. ಈ ದೂರಿನ ಪಟ್ಟಿಯಲ್ಲಿ ರಕ್ಷಣಾ ಇಲಾಖೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ರಾಜೀವ್ ರಕ್ಷಣಾ ಇಲಾಖೆಯ ಉತ್ಪಾದನೆಯಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಇತ್ತು. ಹೀಗೆ ಸಾಲು ಸಾಲು ಆರೋಪಗಳನ್ನು ಹೊತ್ತರೂ ಸಹ ರಾಜೀವ್, ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಕೇರಳದಲ್ಲಿ ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪವನ್ನು ಎದುರಿಸುತ್ತಿರುವ ರಾಜೀವ್, ಬೆಂಗಳೂರಿನ ಕೆರೆಗಳ ಸಂರಕ್ಷಣೆಯ ಮಾತುಗಳನ್ನಾಡುತ್ತಿದ್ದಾರೆ. ಹೀಗೆ ಹಲವಾರು ಆರೋಪಗಳ ಸುಳಿಯಲ್ಲಿರುವ ರಾಜಕಾರಣಿಯ ಸಂಸ್ಥೆ ‘ನಮ್ಮ ಬೆಂಗಳೂರು ಫೌಂಡೇಶನ್’ ನೀಡಲು ಹೊರಟ ಪ್ರಶಸ್ತಿ, ಪುರಸ್ಕಾರ, ಹಣ ಎಲ್ಲವನ್ನೂ ತಿರಸ್ಕರಿಸಿ, ಹಣಕ್ಕಿಂತ ಕರ್ತವ್ಯ ಮುಖ್ಯ ಎಂದಿದ್ದಾರೆ ಐಜಿಪಿ ರೂಪಾ.

ಕೃಪೆ : ಸಮಾಚಾರ

error: Content is protected !!