Thursday, August 16 , 2018 7:46 PMಯಕ್ಷಗಾನ’ಕ್ಕೆ ಅಪಮಾನ: ಜೀ ಕನ್ನಡ ವಿರುದ್ಧ ರೊಚ್ಚಿಗೆದ್ದ ಕರಾವಳಿಗರು6437

ಮಂಗಳೂರು:  ಸಾಮಾನ್ಯವಾಗಿ ಯಾವುದೇ ಟಿವಿ ಕಾರ್ಯಕ್ರಮಗಳು ಆರಂಭಿಸುವುದಕ್ಕೆ ಮುನ್ನ ಒಂದು ವಿಶೇಷ ಸೂಚನೆ ಎಂದು ಪ್ರಸಾರ ಮಾಡ್ತಾರೆ. ”ಈ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಎಲ್ಲ ಅಂಶಗಳು ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ. ಯಾವುದೇ, ಕಲೆ, ಸಂಸ್ಕ್ರತಿ, ಜಾತಿ, ಧರ್ಮಕ್ಕೆ ಧಕ್ಕೆ ತರುವ ಉದ್ದೇಶವಿಲ್ಲ” ಎಂಬ ಸಾರಂಶವನ್ನ ಮೊದಲೇ ಪ್ರಸ್ತತಪಡಿಸುತ್ತಾರೆ.

ಹೀಗಿದ್ದರೂ ಪದೇ ಪದೇ ಕೆಲವು ಕಾರ್ಯಕ್ರಮಗಳು ಟೀಕೆಗೆ ಗುರಿಯಾಗುತ್ತಲೇ ಇರುತ್ತೆ. ಇದೀಗ, ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಕಾರಣ ಕಳೆದ ವಾರದ ಎಪಿಸೋಡ್ ನಲ್ಲಿ ಜಾನಪದ ಕಲೆ ಯಕ್ಷಗಾನ ಬಗ್ಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ. ಈ ಬಗ್ಗೆ ಕರಾವಳಿಯ ಜನರು ಹಾಗೂ ಯಕ್ಷಗಾನ ಕುಟುಂಬಕ್ಕೆ ಸೇರಿದ ಯುವತಿ ಶ್ರುತಿ ಎಂಬುವವರು ಹಾಕಿರುವ ಫೇಸ್ ಬುಕ್ ಪೋಸ್ಟ್ ಇಲ್ಲಿದೆ ನೋಡಿ.

 ಬಾಲಿವುಡ್ ಸಾಂಗ್ ಗೆ ಯಕ್ಷಗಾನ ಡ್ಯಾನ್ಸ್:  ಬಾಲಿವುಡ್ ನ ಖ್ಯಾತ ಹಾಡು ”ಮುಕ್ಕಾಲ..ಮುಕ್ಕಾಬುಲ್ಲಾ” ಹಾಡಿಗೆ ಯಕ್ಷಗಾನದ ನೃತ್ಯವನ್ನು ಬಳಸಿಕೊಂಡು ಯಕ್ಷಗಾನ ಕಲೆಗೆ ಅವಮಾನ ಮಾಡಲಾಗಿದೆ. ಈ ಬಗ್ಗೆ ವಾಹಿನಿ ಕ್ಷಮೆ ಯಾಚಿಸಬೇಕು ಎಂದು ಕರಾವಳಿಯ ಯಕ್ಷಗಾನ ಪ್ರೇಮಿಗಳು ಮತ್ತು ಕಲಾವಿದರು ಆಗ್ರಹಿಸುತ್ತಿದ್ದಾರೆ.

 

ಯಕ್ಷಗಾನ ಕಲಾವಿದರ ಮಗಳ ಅಭಿಪ್ರಾಯ: ”ಯಕ್ಷಗಾನ ಕಲಾವಿದರ ಮಗಳಾಗಿ ನನ್ನದೊಂದು ಕೋರಿಕೆ, ನೀವಂದುಕೊಂಡಂತೆ ಯಕ್ಷಗಾನ ಅನ್ನೋದು ಬರೀ ಕಲೆಯಲ್ಲ ಕರಾವಳಿಗರ ಭಾವನೆ..! ಬರೀ ಯಕ್ಷಗಾನ ಕಾಸ್ಟ್ಯೂಮ್ ಹಾಕಿ ಮನಸಿಗೆ ಬಂದಂತೆ ಕುಣಿಯುವುದೇ ಯಕ್ಷಗಾನವಾಗಿದ್ದರೆ ಎಲ್ಲರೂ ಅದೇ ಮಾಡ್ತಿದ್ರು.. ಯಕ್ಷಗಾನದಲ್ಲೂ ತಿಟ್ಟುಗಳಿವೆ ಮಟ್ಟುಗಳಿವೆ ಶ್ರುತಿ, ಲಯ, ತಾಳ, ರಾಗಗಳಿವೆ, ರಂಗ ನಡೆಯಿದೆ, ಎಲ್ಲವೂ ಇದೆ..”

”ನಮಗಿದೆಷ್ಟು ಪವಿತ್ರವೆಂದರೆ, ರಜಸ್ವಲೆಯಾದವರು ಯಕ್ಷಗಾನಕ್ಕೆ ಹೋಗುವುದಿರಲಿ ದೂರದಿಂದ ಅಕಾಸ್ಮಾತ್ ಕಂಡರೂ ನೋಡಲಾರೆವು, ಮನೋಬಯಕೆ ಈಡೇರಲು ದೇವರಿಗೆ ಹರಕೆಯಾಗಿ ಯಕ್ಷಗಾನ ಸಲ್ಲಿಸುವೆವೆಂದು ಹರಕೆಯಾಗಿ ಹೇಳಿಕೊಳ್ತೇವೆ, ಕೋಲ, ಗಗ್ಗರ, ದೈವಾರಾಧನೆ ಹೇಗೋ ಯಕ್ಷಗಾನವೂ ನಮಗೆ ಹಾಗೆಯೇ..!! ಚೌಕಿಮನೆಗೆ ಚಪ್ಪಲಿ ಹಾಕಿ ಅಡಿ ಇಡಲಾರೆವು, ಶ್ರೀರಾಮ ಪಾತ್ರಧಾರಿ ರಂಗದಲ್ಲಿದ್ದರೆ ಅವನೊಳಗೇ ರಾಮನ ಕಂಡು ನಮಗರಿವಿಲ್ಲದೇ ಮನಸು ಆರಾಧಿಸುತ್ತದೆ, ಅಷ್ಟೇ ಯಾಕೆ ನಮ್ಮ‌ಕಲೆಯನ್ನು ದೇಶದ ಉದ್ದಗಲಕ್ಕೂ ಪಸರಿಸುತ್ತಲೇ ಇದ್ದೇವೆ…”

ಇದರಿಂದ ಸಾಧಿಸಿದ್ದೇನು.?: ”50-100ಕ್ಕೂ ಹೆಚ್ಚಿನ ಮೇಳಗಳಲ್ಲಿ ಕಲಾವಿದರು ಸತತ ಆರು ತಿಂಗಳ‌ಕಾಲ ಕಲಾವಿದರೆಲ್ಲರು ಮನೆ ಬಿಟ್ಟು ಭಕ್ತಿಯಿಂದಲೇ ಬೆವರಿಳಿಸಿ ಇಂತಹ ಸುಮಧುರ ಕಲೆಯ ಪಸರಿಸುವಿಕೆಯಲ್ಲಿ ನಿರತರಾಗಿದ್ದರೆ ಅಲ್ಲೆಲ್ಲೋ ಏಸಿ ರೂಮಲ್ಲಿ ಕೂಳಿತು ಅದೆಷ್ಟು ಸುಲಭವಾಗಿ ‘ಮುಕ್ಕಾಲ್ಲಾ ಮುಕ್ಕಾಬುಲ್ಲಾ’ ಅಂತ ಕುಣಿಸಿ ಕರಾವಳಿಗರ ಭಾವನೆಗೆ ಭರ್ಜಿ ಇಂದ ಇರಿದಿರಲ್ಲಾ, ಇದರಿಂದ ನೀವು ಸಾಧಿಸಿದ್ದಾದರೂ ಏನು..??”

ಕೊನೆಯಪಕ್ಷ ಕ್ಷಮೆ ಕೇಳಿ;  ಯಕ್ಷಗಾನವನೇ ಮಾಡಬೇಕಂದಿದ್ದರೇ ಅದೆಷ್ಟು ಚೆಂದದ ಪದ್ಯಗಳು ನಿಮಗೆ ಬೇಕಿತ್ತು, ನವರಸಗಳಲ್ಲಿ ಯಾವ ರಸದ ಪದ್ಯ ಬೇಕಿತ್ತು..?? ಅದೆಲ್ಲಾ ಬಿಟ್ಟು ಈ ತರದ ಹುಚ್ಚಾಟಗಳನು ಆಡಿದರೆ ಕರಾವಳಿಯಲ್ಲಿ ಯಾರೂ ಕೇಳುವವರಿಲ್ಲ ಎಂದೇ ಅಥವಾ ಏನು ಮಾಡಿದರೂ ಕರಾವಳಿಗರು ಸುಮ್ಮನೆ ಕೂರುವರು ಎಂದೇ..?? ತಪ್ಪು ಹೇಗೂ ಆಗಿದೆ ನಮ್ಮ ಭಾವನೆಗಳಿಗೆ ಘಾಸಿಗೊಳಿಸಿದ್ದಕ್ಕೆ, ಕಲೆಗೆ ಅಪಮಾನಿಸಿದ್ದಕ್ಕೆ ಕೊನೆಯಪಕ್ಷ ಕ್ಷಮೆಯಾದರೂ ಕೇಳುವಿರೆಂಬ ನಂಬಿಕೆಯಲ್ಲಿ ನಾವು…!!!
error: Content is protected !!