Thursday, August 16 , 2018 7:48 PMಗೌರಿ ಲಂಕೇಶ್‌ ಹತ್ಯೆ ಪ್ರಕರಣ : ಚಾರ್ಜ್‌ಶೀಟ್‌ ಸಲ್ಲಿಸಲು ಸಜ್ಜಾದ ಎಸ್‌ಐಟಿ ಅಧಿಕಾರಿಗಳು!355
ಪ್ರಕರಣದಲ್ಲಿ ನವೀನ್ ಕುಮಾರ್ ಬಿಟ್ಟರೆ ಬೇರೆ ಯಾವ ಆರೋಪಿಗಳೂ ಎಸ್‌ಐಟಿ ಅಧಿಕಾರಿಗಳಿಗೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನವೀನ್ ಕುಮಾರ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮತ್ತೊಂದು ಕಡೆ ಉಳಿದ ಆರೋಪಿಗಳಿಗಾಗಿ ನಡೆಯುತ್ತಿರುವ ಹುಡುಕಾಟ ಮುಂದುವರಿದಿದೆ ಎಂದು ತಿಳಿದುಬಂದಿದೆ. 2017 ರ ಸೆಪ್ಟಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ರಾಜರಾಜೇಶ್ವರಿ ನಗರದ ಅವರ ಮನೆಯ ಮುಂದೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದಾದ ನಂತರ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಮಾರ್ಚ್ 2 ರಂದು ಎಸ್ಐಟಿ ಅಧಿಕಾರಿಗಳು ಮದ್ದೂರಿನ ಹಿಂದೂ ಸಂಘಟನೆಯೊಂದರ ಕಾರ್ಯಕರ್ತ ನವೀನ್ ಕುಮಾರ್‌ನನ್ನು ಬಂಧಿಸಿತ್ತು. ನ್ಯಾಯಾಲಯ ನವೀನ್ ಕುಮಾರ್‌ಗೆ ಮಂಪರು ಪರೀಕ್ಷೆ ನಡೆಸಲು ಆದೇಶ ನೀಡಿತ್ತು. ಸ್ವತಃ ನವೀನ್ ಕುಮಾರ್ ಕೂಡ ಮಂಪರು ಪರೀಕ್ಷೆಗೆ ಒಪ್ಪಿಕೊಂಡಿದ್ದ. ಆದ್ರೆ ಮಂಪರು ಪರೀಕ್ಷೆಗೆಂದು ಅಹಮದಾಬಾದ್‌ಗೆ ಕರೆದೊಯ್ದ ನಂತರ ಪರೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿ ಉಲ್ಟಾ ಹೊಡೆದಿದ್ದ. ಎಸ್ಐಟಿ ಅಧಿಕಾರಿಗಳು ಏನೇ ಪ್ರಯತ್ನ ನಡೆಸಿದರೂ ನವೀನ್ ಕುಮಾರ್‌ನಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ತನಿಖೆ ದಾರಿ ತಪ್ಪಿಸಲು ನವೀನ್ ಕುಮಾರ್ ಯತ್ನಿಸುತ್ತಿದ್ದಾನೆ ಎನ್ನಲಾಗಿದೆ.
ಜಾಮೀನಿಗೆ ಯತ್ನಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್..?!

ಆರೋಪಿ ಬಂಧನಕ್ಕೊಳಗಾಗಿ ಮೂರು ತಿಂಗಳಾಗುತ್ತಿದ್ದರೂ ಚಾರ್ಜ್ ಶೀಟ್ ದಾಖಲಿಸಿಲ್ಲ ಎಂಬ ಅಂಶಗಳನ್ನಿಟ್ಟುಕೊಂಡು ಆರೋಪಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಹಾಗೇನಾದ್ರೂ ಆದ್ರೆ ಕೋರ್ಟ್ ನಿಯಮಗಳ ಪ್ರಕಾರ ಆರೋಪಿಗೆ ಜಾಮೀನು ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ಸಿಗದಂತೆ ಮಾಡುವ ಉದ್ದೇಶದಿಂದ ಎಸ್ಐಟಿ ಅಧಿಕಾರಿಗಳು 300 ಪುಟಗಳ ಮೊದಲ ಹಂತದ ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದ್ದಾರೆ. ಇದಾದ ನಂತರ ಮತ್ತೆ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಎಸ್ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಕಾನೂನಿನ ಪ್ರಕಾರ ಒಂದು ಪ್ರಕರಣದ ಎಫ್ಐಆರ್ ದಾಖಲಾದ ನಂತರದ 90 ದಿನಗಳ ಒಳಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು. ತನಿಖೆ ಮುಗಿದಿಲ್ಲವಾದರೆ ಕೋರ್ಟ್ ಅನುಮತಿ ಪಡೆದು ವಿಸ್ತರಿಸಿಕೊಳ್ಳಲು ಅವಕಾಶ ಇದೆ.

error: Content is protected !!