Thursday, February 21 , 2019 5:32 PMಕರಾವಳಿಯ ಅಪರಾಧ ಲೋಕದ ಸಂಶೋಧನಾತ್ಮಕ ಲೇಖನ, ವಿಶೇಷ ವರದಿಗಳಿಂದ ಪರಿಚಿತರಾದ ಖ್ಯಾತ ಪತ್ರಕರ್ತ ಜಿತೇಂದ್ರ ಕುಂದೇಶ್ವರರಿಗೆ “ವಿಶ್ವ” ಗೌರವ619

Posted By: Ranjith Madanthyar

ಮಂಗಳೂರು: ವಿಶ್ವವಾಣಿಯ ವಿಶೇಷ ವರದಿಗಾರ ಜಿತೇಂದ್ರ ಕುಂದೇಶ್ವರ ಅವರಿಗೆ ನಿಸ್ಪೃಹ ಪತ್ರಕರ್ತ ತಿ.ತಾ.ಶರ್ಮ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರು ಜಯನಗರದಲ್ಲಿ ರಾಷ್ಟ್ರೋತ್ಥಾನ ಶಾರೀರಿಕ ವಿಶ್ವ ಸಂವಾದ ಕೇಂದ್ರ ವತಿಯಿಂದ ನಾರದ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. ಜಿತೇಂದ್ರ ಕುಂದೇಶ್ವರ ಅವರ ಬಗ್ಗೆ ಹೇಳಬೇಕಾದರೆ ಇವರು ಕರಾವಳಿಯ ಅಪರಾಧ ಲೋಕದ ಕುರಿತು ವಿಶೇಷ ವರದಿಗಳು, ಸಂಶೋಧನಾತ್ಮಕ ಲೇಖನಗಳನ್ನು ಮಾಡಿದವರು. ಮಾತ್ರವಲ್ಲದೇ “ಕೊರಗರ ಬದುಕಿಗೆ ಮರುಗುವವರೇ ಇಲ್ಲ” ಎಂಬ ವಿಜಯಕರ್ನಾಟಕದಲ್ಲಿ ಪ್ರಕಟವಾದ ಸಾಮಾಜಿಕ ಕಳಕಳಿಯ ವರದಿಗೆ  2003ರಲ್ಲಿ ವಡ್ಡರ್ಸೆ ಪ್ರಶಸ್ತಿ. 2004ರಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೂಲ ನಿವಾಸಿಗಳ ಒಕ್ಕಲೆಬ್ಬಿಸುವ ಕುರಿತು ಬರೆದ ಮಾನವೀಯ ಕಳಕಳಿಯ ವರದಿಗೆ ಗ್ರಾಮೀಣ ವರದಿಗಾರಿಕೆಗೆ ಪ.ಗೋ. ಪ್ರಶಸ್ತಿ. 2010ರಲ್ಲಿ ಮಂಗಳೂರಿನ ಬೀದಿ ಬದಿಯ ಮಕ್ಕಳ ಬದುಕಿನ ಬವಣೆ ಕುರಿತ ಮಾನವೀಯ ಕಳಕಳಿ ವರದಿಗೆ ರಾಜ್ಯಪಾಲರಿಂದ ಚರಕ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.

ಇನ್ನು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗಳ ಇರುವಿಕೆ ಕುರಿತು ಮೊಟ್ಟ ಮೊದಲ ಬಾರಿಗೆ ವರದಿ ಮಾಡಿದ್ದರು. ಹಾಗೂ ಮಂಗಳೂರಿನಲ್ಲಿ ಇಂಡಿಯನ್ ಮುಜಾಹಿದ್ದೀನ್ ಕುರಿತ ಸರಣಿ ಲೇಖನಗಳ ಮೂಲಕ ಕರಾವಳಿಯಲ್ಲಿ ಬೇರೂರುತ್ತಿರುವ ಉಗ್ರವಾದ, ಭೂಗತ ಲೋಕದ, ಅಪರಾಧ ಲೋಕದ ವಿಶೇಷ ವರದಿಗಳು ಮತ್ತು ವಿಶೇಷ ಅಂಕಣಗಳಿಂದ ಜಿತೇಂದ್ರ ಕುಂದೇಶ್ವರ ಅವರು ಪರಿಚಿತರಾಗಿದ್ದಾರೆ.

ಇಷ್ಟು ಮಾತ್ರವಲ್ಲದೇ, ಕನ್ನಡ ಪ್ರಭದಲ್ಲಿ ಶಿರಾಡಿ ಘಾಟಿ ಕುರಿತ ಸರಣಿ ಲೇಖನಗಳನ್ನು ಮಾಡಿದ್ದರು. ಈ ಲೇಖನಗಳಿಂದ ಎಚ್ಚೆತ್ತ ರಾಜ್ಯ ಸರಕಾರ ರಸ್ತೆ ಕಾಂಕ್ರಿಟೀಕರಣಗೊಳಿಸಿದೆ. ವಿಶ್ವವಾಣಿಯಲ್ಲಿ ವಿಶೇಷ ವರದಿಗಳ ಮೂಲಕ, ವಾರನೋಟ ಜನಪ್ರಿಯ ಅಂಕಣದ ಮೂಲಕ ಸರಕಾರದ, ಸಮಾಜದ ಗಮನ ಸೆಳೆದವರು. ಕರ್ನಾಟಕ- ಕೇರಳ ಗಡಿಯ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರು ಬಕೆಟ್‌ಗಳಲ್ಲಿ ಲಂಚ ಪಡೆಯುವ ಕುಟುಕು ಕಾರ್ಯಾಚರಣೆ ಸಂಚಲನ ಉಂಟು ಮಾಡಿತ್ತು. ವಿಶ್ವವಾಣಿಯಲ್ಲಿ ಪ್ರಕಟವಾದ ಆ ವರದಿಯ ಬಳಿಕ ಆ ಚೆಕ್ ಪೋಸ್ಟನ್ನು ತೆಗೆದುಹಾಕಲಾಗಿದೆ.

ಇತ್ತೀಚಿಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಲೇಡೀಸ್ ಟಾಯ್ಲೆಟ್ ಒಳಗೆ ಮೊಬೈಲ್ ಕ್ಯಾಮೆರಾ ಇಟ್ಟ ಕುರಿತು ಮೊಟ್ಟ ಮೊದಲ ಬಾರಿಗೆ ತನಿಖಾ ವರದಿ ಮಾಡಿದ ಕುಂದೇಶ್ವರ ಅವರು, ಇದರ ಪರಿಣಾಮ ಕೃತ್ಯ ನಡೆಸಿದ ಆರೋಪಿ ಸೆರೆಯೊಂದಿಗೆ ವಿವಿಯಲ್ಲಿ ಮಹಿಳೆಯರಿಗೆ ಸಹಿತ ಭದ್ರತೆ ಹೆಚ್ಚಳವಾಗುಂತೆ ಮಾಡಿದ್ದಾರೆ. ಇನ್ನೂ ಇವರು ಒಬ್ಬ ಕಲಾವಿದ ಕೂಡ ಹೌದು, ಪತ್ರಕರ್ತರ ಯಕ್ಷಗಾನದಲ್ಲಿ ದೇವಿ ಪಾತ್ರದಲ್ಲಿ ಅಮೋಘ ಅಭಿನಯದ ಮೂಲಕ ಜನ ಮೆಚ್ಚುಗೆಗಳಿಸಿದ್ದಾರೆ. ಕನ್ನಡ, ತುಳು ಸಿನಿಮಾದಲ್ಲೂ ಪೋಷಕ ಪಾತ್ರ ಮಾಡಿ ಮನಮೆಚ್ಚುಗೆ ಪಡೆದ ಜಿತೇಂದ್ರ ಕುಂದೇಶ್ವರ ಅವರಿಗೆ ಇನ್ನಷ್ಟು ಪ್ರಶಸ್ತಿ, ಗೌರವಗಳು ದೊರೆಯಲಿ ಎಂದು ಶುಭ ಹಾರೈಕೆ.

error: Content is protected !!