Monday, March 25 , 2019 1:45 AMಕೆ‌ಐ‌ಎಡಿಬಿಯ ಮುಖ್ಯ ಇಂಜಿನಿಯರ್ ಟಿ.ಆರ್.ಸ್ವಾಮಿ ಅಮಾನತು37

ಬೆಂಗಳೂರು: ಕೆ‌ಐ‌ಎಡಿಬಿಯ ಮುಖ್ಯ ಇಂಜಿನಿಯರ್ ಟಿ.ಆರ್.ಸ್ವಾಮಿ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದಾಗ ಕೋಟ್ಯಾಂತರ ರೂ. ಹಣ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.

ಭ್ರಷ್ಟಾಚಾರ ನಿಗ್ರಹ ದಳ ಟಿ.ಆರ್.ಸ್ವಾಮಿ ಅವರನ್ನು ಅಮಾನತು ಮಾಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಶಿಫಾರಸಿನ ಅನ್ವಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಳೆದ ವಾರ ಟಿ.ಆರ್.ಸ್ವಾಮಿ ಅವರ ಮಲ್ಲೇಶ್ವರಂನ ಮಂತ್ರಿ ಗ್ರೀನ್ಸ್ ಅಪಾರ್ಟ್‌ಮೆಂಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಸ್ವಾಮಿ ಸಂಬಂಧಿಕರ ಮನೆ ಮೇಲೆಯೂ ದಾಳಿ ನಡೆಸಲಾಗಿತ್ತು. ಆಗ ಕೋಟ್ಯಾಂತರ ರೂ. ಹಣ ಪತ್ತೆಯಾಗಿತ್ತು.

ಎಸಿಬಿ ದಾಳಿ ಬಗ್ಗೆ ಮೊದಲೇ ಮಾಹಿತಿ ತಿಳಿದಿದ್ದ ಟಿ.ಆರ್.ಸ್ವಾಮಿ ಅಪಾರ್ಟ್‌ಮೆಂಟ್ ಬಾಗಿಲು ತೆರೆಯದೇ ಹೈಡ್ರಾಮ ನಡೆಸಿದ್ದರು. ಪಟ್ಟು ಬಿಡದ ಅಧಿಕಾರಿಗಳು ಮನೆಗೆ ಪ್ರವೇಶಿಸಿ, ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿತ್ತು.

ಟಿ.ಆರ್.ಸ್ವಾಮಿ ಮನೆಯಲ್ಲಿ 4.52 ಕೋಟಿ ಹಣ, 1.6 ಕೆಜಿ ಚಿನ್ನ, 10 ನಿವೇಶನದ ಕಾಗದ ಪತ್ರ, ಕುಟುಂಬಸ್ಥರ ಹೆಸರಿನಲ್ಲಿದ್ದ 8 ಮನೆಯ ದಾಖಲೆ, 10 ಎಕರೆ ಕೃಷಿ ಜಮೀನಿನ ಪತ್ರ, 3 ಕಾರುಗಳು ಪತ್ತೆಯಾಗಿದ್ದವು.

ಎಸಿಬಿ ಅಧಿಕಾರಿಗಳು ಮನೆಗೆ ಬರುತ್ತಿದ್ದಂತೆ 14ನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್‌ನಿಂದ ಬ್ಯಾಗ್‌ಗಳನ್ನು ಟಿ.ಆರ್.ಸ್ವಾಮಿ ಕೆಳಗೆ ಬಿಸಾಡಿದ್ದರು. ಅದರಲ್ಲಿ ಹಣ, ದಾಖಲೆ ಪತ್ರಗಳು ಪತ್ತೆಯಾಗಿದ್ದವು. ಅಪಾರ್ಟ್‌ಮೆಂಟ್ ಪಾರ್ಕಿಂಗ್ ಲಾಟ್‌ನಲ್ಲಿದ್ದ ಕಾರಿನಲ್ಲಿ ಹಣ ಪತ್ತೆಯಾಗಿತ್ತು.

error: Content is protected !!