ಮಣಿಪಾಲ: ದರೋಡೆ ಪ್ರಕರಣವೊಂದರ ಆರೋಪಿಯನ್ನು ಹಿಡಿಯಲು ಬೆಂಗಳೂರು ಪೊಲೀಸರು, ಮಣಿಪಾಲ ಪೊಲೀಸರ ಸಹಾಯದೊಂದಿಗೆ ಸಿನಿಮೀಯ ರೀತಿಯಲ್ಲಿ ಹರಸಾಹಸಪಟ್ಟರೂ, ಕೊನೆಗೂ ಆರೋಪಿ ಕೈಗೆ ಸಿಗದೆ ನಾಪತ್ತೆಯಾದ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರಿನ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದ ಆರೋಪಿ ಇಸಾಕ್ ಎಂಬಾತ ಮಣಿಪಾಲಕ್ಕೆ ತನ್ನ ಪ್ರೇಯಸಿ ಸುಜೈನ್ ಎಂಬಾಕೆಯನ್ನು ನೋಡಲು ಬಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರು ಪೊಲೀಸರು, ಆತನನ್ನು ಹಿಡಿಯಲು ಮಣಿಪಾಲಕ್ಕೆ ಬಂದಿದ್ದಾರೆ.
ಆರೋಪಿ ಇಸಾಕ್ ಗರುಡ ಗ್ಯಾಂಗ್ ಸದಸ್ಯನಾಗಿದ್ದು, ಈತ ಮಣಿಪಾಲದಲ್ಲಿ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಥಾರ್ ವಾಹನದಲ್ಲಿ ಆರೋಪಿ ಮಣಿಪಾಲದಲ್ಲಿರುವ ತನ್ನ ಪ್ರೇಯಸಿಯ ಅಪಾರ್ಟ್‌ಮೆಂಟ್‌ಗೆ ಬಂದಿದ್ದಾನೆ. ಈ ವೇಳೆ ಆಕೆ ಮತ್ತು ಆಕೆಯ ತಂಗಿ ಮೊಬೈಲ್ ಸಾರಾ ಒಂದಕ್ಕೆ ತೆರಳಿದ್ದು ಅಲ್ಲಿಗೆ ಬಂದ ಇಸಾಕ್ ಪ್ರೇಯಸಿಯನ್ನು ಗಾಡಿಯಲ್ಲಿ ಕೂರಿಸಿಕೊಂಡು ಹೊರಟಿದ್ದ. ಆಗ ಪೊಲೀಸರು ಆರೋಪಿಯ ಬೆನ್ನು ಬಿದ್ದಿದ್ದು, ಇದನ್ನರಿತ ಆರೋಪಿ ಪೊಲೀಸರಿಗೆ ತನ್ನ ವಾಹನದಿಂದ ಗುದ್ದಿ, ಥಾರ್ ಅನ್ನು ಅತಿವೇಗದಿಂದ ಚಲಾಯಿಸಿ ಸಿಕ್ಕ ಸಿಕ್ಕ ವಾಹನಗಳಿಗೆ ಗುದ್ದಿ ಪರಾರಿಯಾಗಲು ಯತ್ನಿಸಿದ್ದ.
ಈ ವೇಳೆ ಮಣ್ಣಪಳ್ಳದ ಸಮೀಪ ಆತನ ವಾಹನ ಪಂಕ್ಚರ್ ಆಗಿದ್ದು, ಆರೋಪಿ ಮತ್ತು ಆತನ ಪ್ರೇಯಸಿ ಪರಾರಿಯಾಗಲು ಪ್ರಯತ್ನ ನಡೆಸಿದ್ದಾರೆ. ಆದರೆ ಯುವತಿಯ ಮೊಬೈಲ್ ಲೊಕೇಶನ್ ಟ್ರೇಸ್ ಮಾಡುತ್ತಿದ್ದ ಪೊಲೀಸರಿಗೆ ಆಕೆ ಇಂದ್ರಾಳಿಯಲ್ಲಿ ಇರುವುದು ತಿಳಿದು ಆಕೆಯ ಅಕ್ಕನ ಮನೆಯಿಂದ ಅವಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಆರೋಪಿ ಇಸಾಕ್ ನಾಪತ್ತೆಯಾಗಿದ್ದಾನೆ.
ಇಸಾಕ್ ಬೈಂದೂರಿನವನಾಗಿದ್ದು ಈತನ ಮೇಲೆ ಹಲ್ಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಕಳೆದ ವರ್ಷ ನಡೆದ ಕುಂಜಿಬೆಟ್ಟುವಿನ ಗ್ಯಾಂಗ್‌ವಾರ್‌ನ ಸೂತ್ರಧಾರ ಸಹ ಇವನೇ ಆಗಿದ್ದ.
ಇನ್ನು ಪ್ರೇಯಸಿ ಸುಜೈನ್ ಕೇರಳದವಳಾಗಿದ್ದು, ಆಕೆ ಕೆಲಸಮಯದಿಂದ ಉಡುಪಿಯಲ್ಲೇ ವಾಸವಿದ್ದಳು. ಆಕೆಯ ಎಲ್ಲಾ ಖರ್ಚು ವೆಚ್ಚಗಳನ್ನು ಸಹ ಆರೋಪಿಯೇ ಭರಿಸುತ್ತಿದ್ದ ಎನ್ನಲಾಗುತ್ತಿದ್ದು, ಈಕೆಯ ಮನೆಗೆ ಆರೋಪಿ ಆಗಾಗ್ಗೆ ಬಂದು ಹೋಗುತ್ತಿದ್ದ ಎಂದು ತಿಳಿದು ಬಂದಿದೆ.
ಆರೋಪಿಯ ವಾಹನ ವಶಕ್ಕೆ ಪಡೆದಿರುವ ಪೊಲೀಸರು ಅದರಲ್ಲಿದ್ದ ಕತ್ತಿ, ತಲ್ವಾರ್, ಮಾದಕ ವಸ್ತುಗಳು, ನಿರ್ಜೀವ ಸಿಮ್‌ಕಾರ್ಡುಗಳನ್ನು ವಶಕ್ಕೆ ಪಡೆದಿದ್ದಾರೆ. ಸುಜೈನ್ ಅನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.