ಬೆಂಗಳೂರು: ವರನ ಮನೆಯವರು ವರದಕ್ಷಿಣೆಯ ದಾಹದಿಂದ ಮದುವೆ ಮನೆಯಿಂದಲೇ ಎಸ್ಕೇಪ್ ಆದ ನಾಚಿಗೇಡಿನ ವಿಷಯ ನಗರದಲ್ಲಿ ನಡೆದಿದೆ.
ಈ ಬಗ್ಗೆ ವಧುವಿನ ತಂದೆ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದು, ವರ ಜಿಗಣಿ ಮೂಲದ ಪ್ರೇಮ್‌ಚಂದ್ ಮತ್ತು ಆತನ ಹೆತ್ತವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರರ ಪುತ್ರಿ ಫ್ರಾನ್ಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಆಕೆಯ ಕ್ಲಾಸ್‌ಮೇಟ್ ಪ್ರೇಮ್ ಚಂದ್ ಸಹ ಫ್ರಾನ್ಸ್‌ನಲ್ಲಿಯೇ ಕೆಲಸ ಮಾಡುತ್ತಿದ್ದ. ಈ ಇಬ್ಬರ ನಡುವೆಯೂ ಪ್ರೇಮಾಂಕುರವಾಗಿದ್ದು, ಹಿರಿಯರ ಸಮ್ಮತಿಯಿಂದಲೇ ಮದುವೆಯ ಮಾತುಕತೆ, ತಯಾರಿ ನಡೆದಿತ್ತು.
ಮದುವೆಗೆ ಬೆಂಗಳೂರಿನ ರೈಲ್ವೆ ಆಫೀಸರ್ ಎನ್‌ಕ್ಲೇವ್‌ನ ನಂದಿ ಕ್ಲಬ್‌ನಲ್ಲಿ ಎಲ್ಲಾ ರೀತಿಯ ಸಿದ್ಧತೆ ಗಳನ್ನು ವಧುವಿನ ಕಡೆಯವರು ಮಾಡಿಕೊಂಡಿದ್ದರು. ಆದರೆ ವರನ ಕಡೆಯವರು ಕೊನೆಯ ಕ್ಷಣದಲ್ಲಿ ಮದುವೆಗೂ ಮೊದಲೇ 50 ಲಕ್ಷ ರೂ. ಮತ್ತು ಮರ್ಸಿಡಿಸ್ ಬೆಂಜ್ ಕಾರ್ ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟು, ಇದು ಅಸಾಧ್ಯ ಎಂದು ವಧುವಿನ ಕಡೆಯವರು ಹೇಳಿದ ಕಾರಣಕ್ಕೆ ಮದುವೆ ಬಿಟ್ಟು ಪರಾರಿಯಾಗಿದ್ದಾರೆ.
ಮದುವೆಗೆ ಬಟ್ಟೆ ಖರೀದಿಸುವ ಸಂದರ್ಭದಲ್ಲಿ ಪ್ರೇಮಚಂದ್ ಬಲವಂತವಾಗಿ ವಧುವಿನ ಮೇಲೆ ಲೈಂಗಿಕ ಸಂಪರ್ಕ ಸಾಧಿಸಿದ್ದಾನೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.