ಮಂಗಳೂರು: ಕಳೆದ 17 ದಿನಗಳ ಹಿಂದೆ ಮನೆ ತೊರೆದು, ನಾಪತ್ತೆಯಾಗಿ ಪತ್ತೆಯಾದ ಬಳಿಕ ಫರಂಗಿಪೇಟೆಯ ದಿಗಂತ್ ಸದ್ಯ ತನ್ನ ತಾಯಿಯ ಜೊತೆಯಲ್ಲಿ ಮರಳಿ ಮನೆಗೆ ಹೋಗಿದ್ದಾನೆ.
ದಿಗಂತ್ ಪತ್ತೆಯಾದ ಬಳಿಕ ಆತನನ್ನು ಪೊಲೀಸರು ಹೈಕೋರ್ಟ್‌ಗೆ ಹಾಜರು ಪಡಿಸಿದ್ದು, ಈ ಸಂದರ್ಭದಲ್ಲಿ ಆತ ತಾನು ಮನೆಗೆ ಹೋಗುವುದಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದ. ಆತನ ಮನೆಯವರು ಮಗನನ್ನು ತಮ್ಮ ಜೊತೆ ಕಳುಹಿಸಿ ಕೊಡುವಂತೆಯೂ ತಮ್ಮ ಲಾಯರ್ ಮೂಲಕ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ದಿಗಂತ್ ಹೋಗಲೊಪ್ಪದ ಹಿನ್ನೆಲೆಯಲ್ಲಿ ಆತನನ್ನು ಮತ್ತೆ ಬೊಂದೇಲ್‌ನಲ್ಲಿರುವ ಮಕ್ಕಳ ರಕ್ಷಣಾ ಘಟಕದ ವಶಕ್ಕೆ ನೀಡಲಾಗಿತ್ತು. ಆತನಿಗೆ ಸಂಬಂಧಿಸಿದ ನಿರ್ಧಾರಗಳನ್ನು ಘಟಕವೇ ತೆಗೆದುಕೊಳ್ಳುವಂತೆಯೂ ಕೋರ್ಟ್ ಸೂಚಿಸಿತ್ತು.
ಸದ್ಯ ದಿಗಂತ್‌ನ ಅಭಿಪ್ರಾಯ ಪಡೆದುಕೊಂಡ ಮಕ್ಕಳ ರಕ್ಷಣಾ ಘಟಕದ ಸದಸ್ಯರು ಆತನನ್ನು ತನ್ನ ತಾಯಿಯ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ. ಮಗನ ಮರಳುವಿಕೆಯಿಂದ ದಿಗಂತ್ ಕುಟುಂಬದಲ್ಲಿ ಮತ್ತೆ ನಗು ಮೂಡಿದೆ.
ಒಟ್ಟಿನಲ್ಲಿ ಹಲವಾರು ತಿರುವುಗಳನ್ನು ಪಡೆದುಕೊಂಡಿದ್ದ ದಿಗಂತ್ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.