ಮಂಗಳೂರು: ಅಪಾರ್ಟ್ಮಮೆಂಟ್‌ನಿಂದ ಬಿದ್ದು 7 ನೇ ತರಗತಿಯ ಬಾಲಕ ಮೃತಪಟ್ಟ ಘಟನೆ ನಗರದ ಮೇರಿಹಿಲ್ ಬಳಿ ನಡೆದಿದೆ. ಮೃತ ಬಾಲಕನನ್ನು ಸಮರ್ಜಿತ್ ಭಂಡಾರಿ ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಸುಮಾರು 5.30 - 6 ಗಂಟೆಯ ಒಳಗೆ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬೆನ್ನುಮೂಳೆ ಮತ್ತು ತಲೆಗೆ ಗಂಭೀರ ಗಾಯಗಳಾದ ಪರಿಣಾಮ ಮೃತಪಟ್ಟಿದ್ದಾನೆ. ಇವರ ಮನೆ ಅಪಾರ್ಟ್ಮೆಂಟ್‌ನ ಎರಡನೇ ಮಹಡಿಯಲ್ಲಿದ್ದು, ಈತ ಎಷ್ಟನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ ಎನ್ನುವ ಸಮರ್ಪಕ ಮಾಹಿತಿ ಇಲ್ಲ. ಆದರೆ ಆತನ ಪೋಷಕರು ನೀಡಿರುವ ಹೇಳಿಕೆಯಂತೆ ಐದನೇ ಮಹಡಿಯಿಂದ ಬಿದ್ದು ಬಾಲಕ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿದ್ದೇವೆಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಕಾವೂರು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.