ಬೆಂಗಳೂರು: ಯಾರನ್ನೋ ರಕ್ಷಿಸುವ ಸಲುವಾಗಿ ಡಿಆರ್‌ಐ ಅಧಿಕಾರಿಗಳು ನನ್ನನ್ನು ಬಲಿಪಶು ಮಾಡುತ್ತಿದ್ದಾರೆ. ನನ್ನನ್ನು ವಿಚಾರಣೆ ಮಾಡುವ ನೆಪದಲ್ಲಿ 40 ಖಾಲಿ ಹಾಳೆಗಳಿಗೆ ಸಹಿ ಮಾಡಿಸಿಕೊಂಡಿದ್ದು, ನನ್ನ ಮುಖಕ್ಕೆ ಹೊಡೆದಿದ್ದಾರೆ ಎಂದು ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಆರೋಪಿ ರನ್ಯಾ ರಾವ್ ಡಿಆರ್‌ಐ ಹೆಚ್ಚುವರಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ನನ್ನನ್ನು ಸಿಲುಕಿಸಲಾಗಿದೆ. ಇದರಲ್ಲಿ ನಾನೇನೂ ತಪ್ಪು ಮಾಡಿಲ್ಲ ಬಂದಿರುವ ಅವರು, ನನ್ನನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಲ್ಲ, ಬದಲಾಗಿ ವಿಮಾನದಲ್ಲೇ ನನ್ನನ್ನು ಬಂಧಿಸಿದ್ದಾರೆ ಎಂದು ಅವರು 4 ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ನಾನು ದುಬೈನಿಂದ 14 ತುಂಡು ಚಿನ್ನ ತಂದಿರುವುದಾಗಿ ಆರೋಪ ಮಾಡಲಾಗಿದೆ. ಈ ವಿಚಾರದಲ್ಲಿ ಯಾವುದೇ ವಿವರಣೆ ನೀಡಲು ನನಗೆ ಅವಕಾಶ ನೀಡಿಲ್ಲ. ನಾನು ಅಮಾಯಕಿ. ನನ್ನನ್ನು ವಿಮಾನದಲ್ಲಿಯೇ ಬಂಧಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆ ಬಳಿಕ ಖಾಲಿ ಹಾಳೆಗಳಿಗೆ ಸಹಿ ಹಾಕಿಸಿದ್ದು, ಅದಕ್ಕೆ ನಾನು ನಿರಾಕರಿಸಿದಾಗ ನನ್ನ ಮುಖಕ್ಕೆ ಅಧಿಕಾರಿಗಳು ಹೊಡೆದಿದ್ದಾರೆ. ಸಹಿ ಹಾಕದೇ ಹೋದಲ್ಲಿ ನನ್ನ ತಂದೆ, ಕುಟುಂಬ ಸದಸ್ಯರ ಹೆಸರು ಬಹಿರಂಗ ಮಾಡುವುದಾಗಿ ಬೆದರಿಸಿದ್ದಾರೆ. ಇದರಲ್ಲಿ ಅವರ್ಯಾರ ಪಾತ್ರವೇ ಇಲ್ಲ ಎಂದಿದ್ದಾರೆ. ಅಲ್ಲದೆ ಸುಮಾರು 40 - 50 ಟೈಪಿಂಗ್ ಮಾಡಿರುವ ಪುಟಗಳಿಗೆ ಒತ್ತಡ ಹೇರಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೆಯೇ ಅಧಿಕಾರಿಗಳು ನನಗೆ ನಿದ್ದೆ ಮಾಡಲು, ಸರಿಯಾಗಿ ಊಟ ಮಾಡುವುದಕ್ಕೂ ಬಿಡದೆ ಕಿರುಕುಳ ನೀಡಿದ್ದಾರೆ. ದೈಹಿಕ ಹಲ್ಲೆ ನಡೆಸಿದ್ದಾರೆ. ನನ್ನನ್ನು ಸರ್ಚ್, ಮಹಜರ್ ಮಾಡಿಲ್ಲ. ನನ್ನಿಂದ ಏನನ್ನೂ ವಶಕ್ಕೆ ಪಡೆದುಕೊಂಡಿಲ್ಲ. ಇದರಲ್ಲಿ ಕೆಲ ಪ್ರಯಾಣಿಕರನ್ನು ರಕ್ಷಿಸಿ, ನನ್ನನ್ನು ಬಂಧಿಸಿದ್ದಾರೆ. ನನ್ನನ್ನು ಬಂಧಿಸಿದಾಗಿಂದ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿಯ ವರೆಗೆ ನೀಡಿರುವ ದಾಖಲೆಗಳು ನನಗೆ ಸಂಬಂಧಿಸಿದ್ದಲ್ಲ ಎಂದು ರನ್ಯಾ ಪತ್ರದಲ್ಲಿ ಹೇಳಿದ್ದಾರೆ.