ಮಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ನಗರದ ಪೊಲೀಸರು ಬೇಧಿಸಿದ್ದು, 75 ಕೋಟಿ ರೂ. ಮೌಲ್ಯದ 37.87 ಕೆಜಿ ಗಳಷ್ಟು ಮಾದಕ ದ್ರವ್ಯವನ್ನು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಹೆಡೆಮುರಿ ಕಟ್ಟಿದ್ದು, ಇವರು ರಾಜ್ಯಕ್ಕೆ ಮತ್ತು ಇನ್ನಿತರ ರಾಜ್ಯಗಳಿಗೆ ಡ್ರಗ್ಸ್ ಒದಗಿಸುತ್ತಿದ್ದುದಾಗಿ ತಿಳಿದು ಬಂದಿದೆ. ಬಂಧಿತರನ್ನು ಬಾಬಾ ಫಂಟಾ(31) ಮತ್ತು ಅಬಿಗೈಲ್ ಅಡೋನಿಸ್(30) ಎಂದು ಗುರುತಿಸಲಾಗಿದೆ. ಕಳೆದ ವರ್ಷ ಪಂಪ್ವೆಲ್‌ನ ಲಾಡ್ಜ್ ಒಂದರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಹೈದರ್ ಆಲಿ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಈತನಿಗೆ ಡ್ರಗ್ಸ್ ತಲುಪಿಸುತ್ತಿದ್ದ ಪೀಟರ್ ಇಕೆಡಿ ಬೆಲೊನ್ವೋ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಈತನ ಹಿಸ್ಟರಿ ಅರಸಿಕೊಂಡು ಹೋದ ಪೊಲೀಸರಿಗೆ ಆರು ತಿಂಗಳ ಬಳಿಕ ಇದೀಗ ಮತ್ತೊಂದು ದೊಡ್ಡ ಡ್ರಗ್ಸ್ ಜಾಲವನ್ನು ಬೇಧಿಸಲು ಸಾಧ್ಯವಾಗಿದೆ. ಆರೋಪಿಗಳು ಬೆಂಗಳೂರಿಗೆ ವಿಮಾನದ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಂಧಿಸಲಾಗಿದ್ದು, 75 ಕೋಟಿ ಮಾಲ್ಯದ ಡ್ರಗ್ಸ್, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.