ದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡ್ರಗ್ಸ್ ಕಳ್ಳ ಸಾಗಾಟದ ವಿರುದ್ಧ ಹೋರಾಟ ನಡೆಸಲು ಬದ್ಧವಾಗಿದೆ. ಡ್ರಗ್ಸ್ ದಂಧೆ ನಡೆಸುವವರಿಗೆ ಸರ್ಕಾರ ಯಾವುದೇ ರೀತಿಯ ಕರುಣೆಯನ್ನೂ ತೋರಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಡ್ರಗ್ಸ್ ಮುಕ್ತ ಭಾರತ ನಿರ್ಮಾಣದ ಯಾತ್ರೆಗೆ ನಮ್ಮ ಸರ್ಕಾರ ವೇಗ ನೀಡುತ್ತಿದೆ. ಗುವಾಹಟಿ ಮತ್ತು ಇಂಫಾಲ್‌ಗಳಲ್ಲಿ ಸುಮಾರು 88 ಕೋಟಿ ರೂ. ಮೌಲ್ಯದ ಮೆಥೈಂಫೆಟಮೈನ್ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಅಂತಾರಾಷ್ಟ್ರೀಯ ಡ್ರಗ್ಸ್ ಕಾರ್ಟೆಲ್‌ನ ನಾಲ್ವರು ಸದಸ್ಯರನ್ನು ಬಂಧಿಸಿರುವುದಾಗಿಯೂ ಶಾ ಮಾಹಿತಿ ನೀಡಿದ್ದಾರೆ. ಮಾದಕ ವಸ್ತುಗಳ ದಂಧೆಯ ವಿರುದ್ಧದ ನಮ್ಮ ಬೇಟೆ ಮುಂದುವರೆಯುತ್ತದೆ. ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತದೆ. ಅಕ್ರಮ ಮಾದಕ ವಸ್ತು ಮಾರಾಟವನ್ನು ತಡೆಯುವ, ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಅವರು ಒತ್ತಿ ಹೇಳಿದ್ದಾರೆ.