ದಾವಣಗೆರೆ: ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟವನ್ನು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರು ತಡೆದ ಘಟನೆ ಹಳೇ ಕುಂದುವಾಡ ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದಿದೆ. ಸಣ್ಣ ವಾಹನವೊಂದರಲ್ಲಿ ನಾಲ್ಕು ಹಸುಗಳನ್ನು ತುಂಬಿಕೊಂಡು ಹೋಗಲಾಗುತ್ತಿದ್ದು, ಅದೇ ದಾರಿಯಲ್ಲಿ ಬರುತ್ತಿದ್ದ ಪ್ರಮೋದ್ ಮುತಾಲಿಕ್ ಅವರು ಅನುಮಾನಗೊಂಡು ಆ ವಾಹನವನ್ನು ನಿಲ್ಲಿಸಿ ದನ ಸಾಗಾಟ ಮಾಡಲು ಬೇಕಾದ ದಾಖಲೆಗಳನ್ನು ವಿಚಾರಿಸಿದ್ದಾರೆ. ಆದರೆ ಯಾವುದೇ ರೀತಿಯ ದಾಖಲೆ ಇಲ್ಲದಿರುವುದನ್ನು ಕಂಡು ಅವರು ವಿದ್ಯಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವಾಹನ ಮತ್ತು ಹಸುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುತಾಲಿಕ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಇದ್ದರೂ ಕಸಾಯಿಖಾನೆಗೆ ಹಸುಗಳನ್ನು ಸಾಧಿಸಲಾಗುತ್ತಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.