ಮಂಗಳೂರು: ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಲಿ ಯೋಗೀಶ್‌ನ ಸಹಚರನನ್ನು ಮಾದಕ ವಸ್ತುವಿನ ಸಮೇತ ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕಾಸರಗೋಡು ಮೂಲದ ಮೊಗ್ರಾಲ್ ನಿವಾಸಿ ಅಬ್ದುಲ್ ಅಸೀರ್(32) ಎಂದು ಗುರುತಿಸಲಾಗಿದೆ. ಈತನನ್ನು ಸದ್ದು, ಸಾದು, ಮಾಯ ಎಂಬ ಬೇರೆ ಬೇರೆ ಹೆಸರಿನಿಂದಲೂ ಕರೆಯುತ್ತಿದ್ದರು. ಈತ ನಂತೂರಿನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈತನಿಂದ 53 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈತನ ವಿರುದ್ಧ ಪುತ್ತೂರಿನ ಜುವೆಲ್ಲರ್ಸ್ ಒಂದರಲ್ಲಿ ಶೂಟೌಟ್ ನಡೆಸಿದ ಆರೋಪದಲ್ಲಿ ಭಾಗಿಯಾಗಿದ್ದು, ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ಕೊಲೆ, ಫೋಕ್ಸೋ, ಕಳ್ಳತನ ಪ್ರಕರಣ ಕಾಸರಗೋಡು ಠಾಣೆಯಲ್ಲಿ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ವಾರಂಟ್ ಸಹ ಜಾರಿಯಾಗಿತ್ತು.