ಬಳ್ಳಾರಿ: ಶಾಸಕರ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಸಂದೇಶ ಕಳುಹಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ನಗರದ ರೂಪನಗುಡಿ ರಸ್ತೆಯ ಸಂತೋಷ್ ಎಂದು ಗುರುತಿಸಲಾಗಿದೆ. ಈತ ಶಾಸಕ ಭರತ್ ರೆಡ್ಡಿ ಅವರ ವಾಟ್ಸ್ಯಾಪ್ ಸಂಖ್ಯೆಗೆ ‘ಅವರ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ’ ಸಂದೇಶ ರವಾನಿಸಿದ್ದಾನೆ. ಈ ಸಂದೇಶ ಓದಿದ ಶಾಸಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಶಾಸಕರ ಕಚೇರಿ ಪರಿಶೀಲನೆ ಮಾಡಿದ್ದಾರೆ. ಆ ಬಳಿಕ ಸಂದೇಶ ಬಂದ ಮೊಬೈಲ್ ಸಂಖ್ಯೆಯನ್ನು ಟ್ರೇಸ್ ಮಾಡಿ ಸಂತೋಷ್‌ನನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಸಂತೋಷ್ ಈ ಕೆಲಸ ಮಾಡಿದ್ದಾಗಿ ಪೊಲೀಸ್ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ. ಆದರೆ ಈತ ಕುಡಿದ ಮತ್ತಿನಲ್ಲಿ ಇದನ್ನು ಮಾಡಿದ್ದಾನೋ ಅಥವಾ ಇದರ ಹಿಂದೆ ಬೇರೇನಾದರೂ ರಹಸ್ಯ ಇದೆಯೋ ಎನ್ನುವುದು ಪೊಲೀಸ್ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.