ಮಹಾದೇವಪುರ: ಮಧ್ಯರಾತ್ರಿ ವೇಳೆಗೆ ಗ್ರಾಮ ಪಂಚಾಯತ್ ಸದಸ್ಯನ ಮನೆಗೆ ಯಾರೋ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಮನೆಯೊಳಗಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು ಆವಲಹಳ್ಳಿ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಂಡಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಜಗನ್ನಾಥ ಎಂಬವರ ಮನೆಗೆ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಲಾಗಿದೆ. ಮನೆಯೊಳಗೆ ನಿದ್ರಿಸುತ್ತಿದ್ದ ಜಗನ್ನಾಥ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಅದೃಷ್ಟವಶಾತ್ ಅವಘಡವಿಲ್ಲದೆ ಪಾರಾಗಿದ್ದಾರೆ. ಮನೆಯ ಮೇಲಿನ ಮಹಡಿಯಲ್ಲಿ ಮಲಗಿದ್ದ ಜಗನ್ನಾಥ್ ಮತ್ತು ಮನೆಯವರು ಸ್ಪೋಟದ ಸದ್ದು ಕೇಳಿ ಎಚ್ಚರಗೊಂಡಿದ್ದಾರೆ. ಸ್ಪೋಟದ ಬಳಿಕ ಮನೆಯಲ್ಲಿ ಬೆಂಕಿ ಆವರಿಸಿದ್ದು ಪೀಟೋಪಕರಣಗಳು, ಟಿವಿ, ಪ್ರಿಡ್ಜ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ. ಸ್ಥಳೀಯರು ಬಾಗಿಲು ಒಡೆದು ಜಗನ್ನಾಥ್ ಮತ್ತು ಮನೆಯವರನ್ನು ರಕ್ಷಣೆ ಮಾಡಿದ್ದಾರೆ. ಮನೆಯ ಹೊರಗಡೆ 10 ಲೀ. ಪೆಟ್ರೋಲ್ ಕ್ಯಾನ್ ಬಳಸದೆ ಬಾಕಿಯಾಗಿದ್ದು, ಅದನ್ನು ಕಿಡಿಗೇಡಿಗಳು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.