ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಆರೋಪಿ ರನ್ಯಾ ರಾವ್ ಮತ್ತು ಆಕೆಯ ಮಲ ತಂದೆ ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ಮಾಧ್ಯಮಗಳು ಮಾನಹಾನಿಕರ ಸುದ್ದಿಗಳನ್ನು ಪ್ರಚಾರ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಚಿನ್ನ ಕಳ್ಳ ಸಾಗಾಟದ ಬಗ್ಗೆ ರನ್ಯಾ ಅವರ ತನಿಖೆ ನಡೆಯುತ್ತಿದೆ. ಈ ನಡುವೆಯೇ ಹೈಕೋರ್ಟ್ ಈ ಆದೇಶ ನೀಡಿರುವುದಾಗಿದೆ. ರನ್ಯಾ ತಾಯಿ ಎಚ್. ಪಿ. ರೋಹಿಣಿ ಈ ಸಂಬಂಧ ಮಾರ್ಚ್ 12 ರಂದು ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ಜೂನ್ 2 ರ ವರೆಗೆ ನಟಿಯ ಬಗ್ಗೆ ಯಾವುದೇ ರೀತಿಯ ಮಾನ ಹಾನಿಕರ ವಿಚಾರಗಳನ್ನು ಪ್ರಕಟಿಸದಂತೆ ಕೋರ್ಟ್ ಆದೇಶಿಸಿದೆ. ಹಾಗೆಯೇ ರಾಮಚಂದ್ರ ರಾವ್ ಸಲ್ಲಿಕೆ ಮಾಡಿರುವ ಅರ್ಜಿಯನ್ವಯ ಸಹ ಕೋರ್ಟ್ ಇದೇ ಆದೇಶ ನೀಡಿದೆ. ಮಾಧ್ಯಮಗಳು ಸುಳ್ಳು, ಮಾನಹಾನಿಕರ ವಿಚಾರಗಳನ್ನು ಪ್ರಕಟಿಸುವುದು ತಡೆಯಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.