ರಾಯಚೂರು: ಹೊಟೇಲೊಂದರಲ್ಲಿ ಹೊಟ್ಟೆ ಬಿರಿಯುವಂತೆ ಚಿಕನ್ ಬಿರಿಯಾಣಿ ತಿಂದು, ನಕಲಿ ನೋಟು ನೀಡಿ ಬಿಲ್ ಪೇ ಮಾಡಿದ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ. ಬಂಧಿತ ಆರೋಪಿಗಳನ್ನು ರಮೇಶ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ. ಆರೋಪಿಗಳು ನಗರದ ಹೊಟೇಲ್ ಒಂದರಲ್ಲಿ ಚಿಕನ್ ಬ್ರಿಯಾನ್ ತಿಂದು, ಆ ಬಳಿಕ ನಕಲಿ ನೋಟು ನೀಡಿ ಬಿಲ್ ಪಾವತಿ ಮಾಡಿದ್ದಾರೆ. ಈ ನೋಟಿನಲ್ಲಿ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಾಗಿತ್ತು. ಆರೋಪಿಗಳು ಬಿಲ್ ಪಾವತಿ ಮಾಡಿದ ಕೆಲ ಹೊತ್ತಿನ ಬಳಿಕ ಹೊಟೇಲ್ ಮಾಲೀಕನಿಗೆ ಸಂದೇಹ ಬಂದಿದೆ. ಅದರಂತೆ ಪರಿಶೀಲನೆ ಮಾಡಿದಾಗ ನೋಟು ನಕಲಿ ಎನ್ನುವುದು ತಿಳಿದಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.