ಸುಳ್ಯ: ವಿವಾಹ ನಿಗದಿಯಾಗಿದ್ದ ಯುವಕನೊಬ್ಬ ನಾಪತ್ತೆಯಾದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಳಿಲ ಗ್ರಾಮದ ದೇರಂಪಾಲು ಶೀನಪ್ಪ ರೈ ಎಂಬವರ ಪುತ್ರ ಹರೀಶ್ ರೈ ಅವರೇ ನಾಪತ್ತೆಯಾದವರು. ಸುಮಾರು 13 ವರ್ಷಗಳಿಂದ ಪುತ್ತೂರಿನ ಖಾಸಗಿ ಫೈನಾನ್ಸ್ ಒಂದರಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದು, ಕೆಲ ಸಮಯದ ಹಿಂದೆ ಇವರ ದೂರದ ಸಂಬಂಧದ ಹುಡುಗಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹರೀಶ್ ಅವರು ಮಾರ್ಚ್ 20 ರಂದು ಬೆಳಗ್ಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದ ಯುವತಿಯ ಮನೆಗೆ ಹೋಗಿ, ಅಲ್ಲಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದರು ಎಂದು ತಿಳಿದು ಬಂದಿದೆ. ಬೈಕ್‌ನಲ್ಲಿ ತೆರಳಿದ್ದ ಅವರು ಸಂಜೆ ಗಂಟೆ 5 ರ ವೇಳೆಗೆ ಮನೆಗೆ ಬರಬೇಕಾಗಿತ್ತು. ಆದರೆ ಸಂಜೆ 6 ಗಂಟೆ ಕಳೆದರೂ ಅವರು ಮನೆಗೆ ಬಂದಿಲ್ಲ. ಈ ಹಿನ್ನೆಲೆ ಯುವತಿಗೆ ಕರೆ ಮಾಡಿ ಕೇಳಿದಾಗ, ಹರೀಶ್ ಮನೆಗೆ ಬೆಳಗ್ಗೆಯೇ ಬಂದು ನನ್ನನ್ನು ಬೈಕ್‌ನಲ್ಲಿ ಪುತ್ತೂರಿಗೆ ಕರೆದುಕೊಂಡು ಹೋಗಿದ್ದು, ನಾನು ವಿಟ್ಲಕ್ಕೆ ತೆರಳಬೇಕಾದ ಹಿನ್ನೆಲೆ ನನ್ನನ್ನು ಪುತ್ತೂರು ಬಸ್ಸು ನಿಲ್ದಾಣದ ಸಮೀಪ ಇಳಿಸಿ, ತಾನು ಚಿನ್ನಾಭರಣ ಖರೀದಿ ಸಂಬಂಧ ಮಂಗಳೂರಿಗೆ ಹೋಗುವುದಾಗಿ ತಿಳಿಸಿದ್ದಾರೆ. ಆ ಬಳಿಕ ನಾನು 12 ಗಂಟೆ ಸುಮಾರಿಗೆ ಹರೀಶ್ ಅವರಿಗೆ ಕರೆ ಮಾಡಿದಾಗ ಫೋನ್ ಸ್ವಿಚ್ಡ್ ಆಫ್ ಬರುತ್ತಿತ್ತು ಎಂದು ತಿಳಿಸಿದ್ದಾರೆ. ಸಂಬಂಧಿಕರು, ಸಹೋದ್ಯೋಗಿಗಳಿಗೆ ಕರೆ ಮಾಡಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆ ಹರೀಶ್ ಸಹೋದರ ವೆಂಕಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.