ಉಪ್ಪಿನಂಗಡಿ: ಹೆಂಡತಿ ತವರಿಗೆ ಹೋದ ಬೇಸರದಲ್ಲಿ ಪತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೌಕ್ರಾಡಿ ಗ್ರಾಮದ ಪಟ್ಲಡ್ಕ ಎಂಬಲ್ಲಿ ನಡೆದಿದೆ. ಶೇಶಪ್ಪ(38) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಘಟನೆಯ ವಿವರ:ಶೇಶಪ್ಪ ಅವರು ಗುರುವಾರ ರಾತ್ರಿ ಮನೆಗೆ ಬಂದ ತಕ್ಷಣವೇ ಅವರ ತಾಯಿ ರಾಮಕ್ಕ ಅವರ ಜೊತೆಗೆ ಜಗಳವಾಡಿದ್ದರು. ಈ ಸಂದರ್ಭದಲ್ಲಿ ತಾಯಿ ರಾಮಕ್ಕ ಅವರು ಸ್ವ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ನೆರೆ ಮನೆಗೆ ತೆರಳಿದ್ದರು. ಈ ವೇಳೆ ಮನೆಯ ಹಾಲ್‌ನ ಅಡ್ಡ ಪಕ್ಕಾಸಿಗೆ ನೇಣು ಹಾಕಿಕೊಂಡು ಶೇಶಪ್ಪ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ರಾಮಕ್ಕ ಅವರು ಉಪ್ಪಿನಂಗಡಿ ಠಾಣಾ ಪೊಲೀಸರಿಗೆ ದೂರು ನೀಡಿದ್ದು, ‘ ಸೊಸೆ ತವರಿಗೆ ಹೋದ ಕಾರಣದಿಂದ ಶೇಶಪ್ಪ ಅವರು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ’ ತಿಳಿಸಿದ್ದಾರೆ. ಶೇಶಪ್ಪ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೌಟುಂಬಿಕ ಭಿನ್ನಾಭಿಪ್ರಾಯವೇ ಈ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.