ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಎರಡನೇ ಆರೋಪಿ ತರುಣ್‌ರಾಜ್ ರನ್ಯಾ ಬುಕ್ ಮಾಡಿದ ಟಿಕೆಟ್‌ನಿಂದಲೇ ದುಬೈ ಟು ಹೈದರಾಬಾದ್‌ಗೆ ಪ್ರಯಾಣ ಮಾಡಿದ್ದಾಗಿ ತಿಳಿದು ಬಂದಿದೆ. ರನ್ಯಾ ತರುಣ್ ಖಾತೆಗೆ ವರ್ಗಾಯಿಸಿದ ಹಣವನ್ನೇ ಟಿಕೆಟ್ ಬುಕ್ಕಿಂಗ್‌ಗೆ ಬಳಕೆ ಮಾಡಲಾಗಿದೆ. ಈ ವಹಿವಾಟಿನ ದಾಖಲೆಗಳು ಅಧಿಕಾರಿಗಳಿಗೆ ದೊರೆತಿವೆ ಎನ್ನಲಾಗುತ್ತಿದೆ. ತರುಣ್ ರನ್ಯಾಳಿಗೆ ದುಬೈನಲ್ಲಿ ಗೋಲ್ಡ್ ಹಸ್ತಾಂತರ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಈ ಅಪರಾಧದಲ್ಲಿ ತರುಣ್ ಸಹ ಪಾಲುದಾರ ಎನ್ನುವ ಸಂಶಯ ಇದರಿಂದ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ರನ್ಯಾ 2023 - 25 ನಡುವೆ ಸುಮಾರು 50 ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿದ್ದರು. ಇದರಲ್ಲಿ ಸುಮಾರು 26 ಯಾತ್ರೆಯಲ್ಲಿ ರನ್ಯಾ ಜೊತೆ ತರುಣ್ ಸಹ ಇದ್ದುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ. ತನಿಖೆಯ ಭಾಗ ಎಂಬಂತೆ ಅಧಿಕಾರಿಗಳು ತರುಣ್ ವಿರುದ್ಧ ಲುಕ್‌ಔಟ್ ನೋಟೀಸ್ ಜಾರಿ ಮಾಡಿದ್ದರು. ತರುಣ್ ಮಾರ್ಚ್ 8 ರಂದೇ ದೇಶ ಬಿಟ್ಟು ಪರಾರಿಯಾಗಲು ಪ್ರಯತ್ನಿಸಿದ್ದ. ಆದರೆ ಈ ಪ್ರಯತ್ನ ವಿಫಲವಾದಾಗ ಆತ ಹೈದರಾಬಾದ್ ಟು ಬೆಂಗಳೂರಿಗೆ ಪ್ರಯಾಣ ಮಾಡಿದ್ದ. ತರುಣ್ ಬಂಧನಕ್ಕೆ ಪೂರಕವಾದ ಎಲ್ಲಾ ಮಾಹಿತಿಗಳನ್ನು ಅಧಿಕಾರಿಗಳು ಕೋರ್ಟ್‌ಗೆ ನೀಡಿದ್ದಾಗಿ ತಿಳಿದು ಬಂದಿದೆ. ಕೊನೆಗೂ ಆತನನ್ನು ಬಂಧಿಸಿದ ಅಧಿಕಾರಿಗಳು ಆತನ ಸಹೋದರಿಗೆ ಬಂಧನದ ಮಾಹಿತಿ ನೀಡಿದ್ದಾರೆ. ತರುಣ್ ಅಮೇರಿಕಾದ ಪೌರತ್ವ ಸಹ ಹೊಂದಿದ್ದು, ಇದು ಆತ ಮುಂದೆ ಯಾವ ರೀತಿಯಲ್ಲಿ ಹೆಜ್ಜೆ ಇಡಲು ನಿರ್ಧರಿಸಿದ್ದ ಎಂಬುದರ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ. ತರುಣ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಅಧಿಕಾರಿಗಳು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ.