ಬೆಂಗಳೂರು: ಖಾಲಿಯಾದ ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರಕ್ಕೆ ಹಾನಿ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಹೊಸ ಆಲೋಚನೆಯೊಂದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ. ಮಿನರಲ್ ವಾಟರ್‌ಗಳನ್ನು ಮಾರಾಟ ಮಾಡುವ ಅಂಗಡಿಗಳು ಕಡ್ಡಾಯವಾಗಿ ಖಾಲಿಯಾದ ನೀರಿನ ಬಾಟಲಿಗಳನ್ನು ಕನಿಷ್ಟ ದರಕ್ಕೆ ಪಡೆಯುವಂತೆ ನಿಯಮ ರೂಪಿಸಲು ಅವರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದ್ದು, ಕುಡಿಯುವ ನೀರನ್ನು ಬಾಟಲಿಗಳ ಮೂಲಕ ಮಾರಾಟ ಮಾಡುವ ಸಂಸ್ಥೆಗಳಿಗೆ, ಆ ಬಾಟಲುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಜವಾಬ್ದಾರಿ ಸಹ ಇರುತ್ತದೆ. ಈ ನಿಟ್ಟಿನಲ್ಲಿ ಖಾಲಿ ನೀರಿನ ಬಾಟಲಿಗಳನ್ನು ಕನಿಷ್ಟ ದರ ನೀಡಿ ಹಿಂಪಡೆಯುವಂತೆ ನಿಯಮ ಜಾರಿ ಮಾಡಿದಲ್ಲಿ ಪ್ಲಾಸ್ಟಿಕ್ ವಸ್ತುಗಳ ಸೂಕ್ತ ವಿಲೇವಾರಿ ಸಾಧ್ಯವಾಗುತ್ತದೆ. ಜೊತೆಗೆ ಪ್ಲಾಸ್ಟಿಕ್ ಬಾಟಲಿಗಳ ಹಾವಳಿಯನ್ನು ಸಹ ತಪ್ಪಿಸಬಹುದಾಗಿದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಏಕ ಬಳಕೆಯ ಪ್ಲಾಸ್ಟಿಕ್‌ಗಳ ಮಾರಾಟ, ಬಳಕೆಗೆ ನಿಷೇಧ ಹೇರಿದ್ದು, ಇದೀಗ ರಾಜ್ಯ ಸರ್ಕಾರ ಸಹ ನೀರಿನ ಪ್ಲಾಸ್ಟಿಕ್ ಬಾಟಲಿಗಳಿಗೆ ಸಂಬಂಧಿಸಿದ ಹಾಗೆ ನಿಯಮ ರೂಪಿಸಿರುವುದಾಗಿದೆ. ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ ಹೆಚ್ಚಾಗಿದ್ದು, ಇದು ಪರಿಸರಕ್ಕೆ ಹಾನಿ ಎಸಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ತಿಳಿದು ಬಂದಿದೆ.