ನ ಉಡುಪಿ: ನಗರದ ನೆಜಾರಿನ ತಾಯಿ ಮತ್ತು ಮಕ್ಕಳ ಹತ್ಯೆ ಆರೋಪಿ ಪ್ರವೀಣ್ ಚೌಗಲೆ ‘ಈ ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ವಿಡಿಯೋ ಮಾಡುವಂತೆ’ ಉಡುಪಿಯ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಜೊತೆಗೆ ಆರೋಪಿ ಪ್ರವೀಣ್ ಈ ಕುಕೃತ್ಯ ನಡೆಸುವಾಗ ಬಳಕೆ ಮಾಡಿದ್ದ ಕಾರಿನ ಸಾಲದ ಕಂತು ಪಾವತಿಯಾಗದೇ ಇದ್ದು, ಈ ಹಿನ್ನೆಲೆಯಲ್ಲಿ ಕಾರು ವಶಕ್ಕೆ ಪಡೆಯಲು ಅವಕಾಶ ನೀಡಬೇಕು ಎಂಬ ಬ್ಯಾಂಕ್‌ನ ಅರ್ಜಿಯನ್ನು, ಈ ಪ್ರಕರಣದ ವಿಚಾರಣೆ ಮಗಿಯುವವರೆಗೆ ಕಾಯ್ದಿರಿಸಲಾಗಿದೆ. ಕಾರನ್ನು ಬ್ಯಾಂಕ್ ಸುಪರ್ದಿಗೆ ನೀಡಿದಲ್ಲಿ, ಅವರು ಅದನ್ನು ಬೇರೆಯವರಿಗೆ ಮಾರಾಟ ಮಾಡಿದರೆ ಪ್ರಕರಣದ ಸಾಕ್ಷ್ಯ ನಷ್ಟಪಡುತ್ತದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆ ಈ ಆದೇಶ ಕಾಯ್ದಿರಿಸಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಎ. 3 ಕ್ಕೆ ನಿಗದಿಪಡಿಸಿ ನ್ಯಾಯಾಲಯ ಆದೇಶ ನೀಡಿದೆ.