ಬೆಂಗಳೂರು: ಚಿನ್ನ ರಿಕವರಿ ಮಾಡುವ ಹಿನ್ನೆಲೆ ಚಿನ್ನದ ವ್ಯಾಪಾರಿಯಿಂದ ಚಿನ್ನದ ಗಟ್ಟಿ ಪಡೆದು ಅದನ್ನು ಹಿಂದಿರುಗಿಸದೆ, ಹಣವನ್ನೂ ನೀಡದೆ ಮೋಸ ಮಾಡಿದ, ಅಧಿಕಾರ ದುರ್ಬಳಕೆ ಮಾಡಿದ ಆರೋಪದಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷ್ ಎಂಬವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರು ಸಂತೋಯ್ ಅವರನ್ನು ಅಮಾನತು ಮಾಡಿರುವುದಾಗಿದೆ. ಸಂತೋಷ್ 2022 ರಲ್ಲಿ ಹೊಸೂರು ಠಾಣಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ರಿಕವರಿ ಚಿನ್ನವನ್ನು ದುರುಪಯೋಗ ಮಾಡಿಕೊಂಡ ಆರೋಪ ಇವರ ಮೇಲಿತ್ತು. ಚಿನ್ನದ ವ್ಯಾಪಾರಿಯಿಂದ 950 ಗ್ರಾಂ ಚಿನ್ನದ ಗಟ್ಟಿ ಪಡೆದು ‘ರಿಕವರಿ ಚಿನ್ನ ತೋರಿಸಬೇಕಿದೆ. ಚಿನ್ನದ ಫೋಟೋ ತೆಗೆದು ಹಿಂದೆ ನೀಡುತ್ತೇನೆ’ ಎಂದು ಹೇಳಿ ಚಿನ್ನ ಪಡೆದುಕೊಂಡು ಎಸ್ಕೇಪ್ ಆಗಿದ್ದಾರೆ. ಬಳಿಕ ವ್ಯಾಪಾರಿ ಚಿನ್ನವನ್ನು ಮರಳಿ ನೀಡುವಂತೆ ಕೇಳಿದಾಗ ಆತನಿಗೆ ಹಣ ನೀಡುವುದಾಗಿ ತಿಳಿಸಿ ಚೆಕ್ ನೀಡಿದ್ದರು. ಈ ಚೆಕ್ ಬೌನ್ಸ್ ಆಗಿತ್ತು. ಮತ್ತೆ ಚಿನ್ನದ ಅಂಗಡಿ ಮಾಲೀಕ ಚಿನ್ನ ಕೇಳಿದಾಗ ಆತನಿಗೆ ಸಂತೋಷ್ ಬೆದರಿಕೆ ಒಡ್ಡಿದ್ದರು. ಈ ಹಿನ್ನೆಲೆ ಸಂತೋಷ್ ಮೇಲೆ ಅಧಿಕಾರ ದುರುಪಯೋಗ ಮತ್ತು ವಂಚನೆ ಪ್ರಕರಣ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದರಿಂದ ಸಂತೋಷ್ ಅವರನ್ನು ಅಮಾನತು ಮಾಡಲಾಗಿದೆ.