ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಮಹಿಳೆಯನ್ನು ಕಟ್ಟಿ ಹಾಕಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸಂತ್ರಸ್ತ ಮಹಿಳೆ ಮನವಿ ಸಲ್ಲಿಸಿದ್ದಾರೆ. ಉಡುಪಿಗೆ ಬಂದು ಹಲವು ವರ್ಷಗಳಾಗಿದ್ದು, ಮಲ್ಪೆ ಮೀನುಗಾರರ ಸಂಘದ ಸಹಕಾರದಿಂದ ಬಂದರಿನಲ್ಲಿ ಕೆಲಸ ಮಾಡಿಕೊಂಡಿದ್ದೇವೆ. ಇತ್ತೀಚೆಗೆ ನಡೆದ ಅಹಿತಕರ ಘಟನೆಯನ್ನು ನಮ್ಮ ಸಮುದಾಯದ ಪ್ರಮುಖರು ಮತ್ತು ಮೀನುಗಾರರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಒಳ್ಳೆಯ ರೀತಿಯಲ್ಲಿ ಪರಿಹರಿಸಿಕೊಂಡಿದ್ದೇವೆ. ಆದರೂ ಮೀನುಗಾರರ ಮೇಲೆ ಕೇಸು ದಾಖಲು ಮಾಡಲಾಗಿದೆ. ಮುಗ್ಧ ಮೀನುಗಾರರನ್ನು ಬಂಧಿಸಿರುವುದು ಸರಿಯಲ್ಲ. ಅವರ ಮೇಲಿನ ಕೇಸುಗಳನ್ನು ಹಿಂಪಡೆದು ನಮಗೆ ಬಂದರಿನಲ್ಲಿ ಸೌಹಾರ್ದಯುತವಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಮನವಿಯನ್ನು ಶಾಸಕ ಯಶಪಾಲ್ ಸುವರ್ಣ ಅವರಿಗೆ ನೀಡಲಾಯಿತು.