ಉಡುಪಿ: ನಿಟ್ಟೂರು ಬಳಿಯಲ್ಲಿ ಅಕ್ರಮ ಮರಳು ಸಾಗಾಟದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ವಾಹನವನ್ನು ಬಿಡುಗಡೆ ಮಾಡುವ ಸಂಬಂಧ ದೂರುದಾರರ ಬಳಿ ಲಂಚಕ್ಕೆ ಬೇಡಿಕೆ ಇಟ್ಟ ನ್ಯಾಯಾಲಯದ ಸಹಾಯಕ ಅಭಿಯೋಜಕರಾದ ಗಣಪತಿ ನಾಯ್ಕ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಾಹನದ ಬಿಡುಗಡೆಗಾಗಿ ದೂರುದಾರರು ಉಡುಪಿಯ ಮಾನ್ಯ ಪ್ರಿನ್ಲಿಪಾಲ್ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಾಹನದ ಬಿಡುಗಡೆಗೆ ಸಂಬಂಧಿಸಿದ ಮುಂದಿನ ಕ್ರಮಗಳಿಗಾಗಿ ಆಕ್ಷೇಪಣೆ ಸಲ್ಲಿಸಲು ಗಣಪತಿ ನಾಯ್ಕ್ ಅವರು 2000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ದೂರುದಾರರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರುದಾರರಿಂದ ಲಂಚ ಸ್ವೀಕರಿಸುವಾಗ ಎ.ಪಿ.ಪಿ. ಅವರ ಕೊಠಡಿಯಲ್ಲಿ ಗಣಪತಿ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.