ಬೆಂಗಳೂರು: ಪತಿಯೊಬ್ಬ ಪತ್ನಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಶೌಚಾಲಯದಲ್ಲಿಟ್ಟು, ಆ ಬಳಿಕ ಮುಂಬೈಗೆ ಓಡಿ ಹೋದ ಘಟನೆ ದೊಡ್ಡಕಮ್ಮನಹಳ್ಳಿಯಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಪುಣೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಒಂದು ತಿಂಗಳ ಹಿಂದಷ್ಟೇ ದೊಡ್ಡಕಮ್ಮನಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ರಾಕೇಶ್ ರಾಜೇಂದ್ರ ಖೆಡೇಕರ್ ಮತ್ತು ಆತನ ಪತ್ನಿ ಗೌರಿ ಅನಿಲ್ ಸಾಂಬೇಕರ್ ವಾಸ್ತವ್ಯ ಆರಂಭಿಸಿದ್ದರು. ಇದೀಗ ಗೌರಿಯನ್ನು ಚಾಕು ಇರಿದು ಹತ್ಯೆ ಮಾಡಿರುವ ರಾಕೇಶ್, ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಮನೆಯ ಶೌಚಾಲಯದಲ್ಲಿರಿಸಿ, ಆ ಬಳಿಕ ಮನೆಗೆ ಬೀಗ ಜಡಿದು ಮುಂಬೈಗೆ ತೆರಳಿದ್ದ. ಆರೋಪಿ ಅಲ್ಲಿಂದ ಮನೆ ಮಾಲೀಕರಿಗೆ ಕರೆ ಮಾಡಿ ತಾನು ಪತ್ನಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಸಿ ಶೌಚಾಲಯದಲ್ಲಿ ಇಟ್ಟಿದ್ದೇನೆ ಎಂದು ತಿಳಿಸಿದ್ದಾನೆ. ಹಾಗೆಯೇ ಮಹಾರಾಷ್ಟ್ರ ಪೊಲೀಸರಿಗೆ ಕರೆ ಮಾಡಿ ತಾನು ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ. ಇತ್ತ ಮನೆ ಮಾಲೀಕರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಜೊತೆಗೆ ಮಹಾರಾಷ್ಟ್ರ ಪೊಲೀಸರು ಸಹ ಇಲ್ಲಿನ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪೊಲೀಸರು, ಎಫ್‌ಎಸ್‌ಎಲ್ ಮತ್ತು ಸೊಕೋ ತಂಡದ ಜೊತೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಈವೇಳೆ ಸೂಟ್‌ಕೇಸಿನಲ್ಲಿ ಶವ ಪತ್ತೆಯಾಗಿದೆ. ಗೌರಿಯ ದೇಹದ ವಿವಿಧ ಕಡೆಗಳಲ್ಲಿ ಚಾಕುವಿನಿಂದ ಚುಚ್ಚಿದ ಗುರುತು ಇದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗೌರಿ ಕುಟುಂಬಸ್ಥರಿಗೂ ವಿಷಯ ಮುಟ್ಟಿಸಲಾಗಿದೆ. ಇನ್ನು ಆರೋಪಿ ರಾಕೇಶ್‌ನನ್ನು ಪುಣೆಯ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಾಡಿ ವಾರೆಂಟ್ ಪಡೆದು ಕರೆತರವು ಇಲ್ಲಿನ ಪೊಲೀಸರು ಪುಣೆಗೆ ತೆರಳಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.