ಲಕ್ನೋ: ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮುಸಲ್ಮಾನರಿಗೆ 4% ಮೀಸಲಾತಿ ನೀಡಿರುವ ವಿಷಯಕ್ಕೆ ಸಂಬಂಧಿಸಿದ ಹಾಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕರ್ನಾಟಕ ಸರ್ಕಾರದ ಮುಸ್ಲಿಂ ಮೀಸಲಾತಿ ನಿರ್ಣಯ ಸಂವಿಧಾನ ವಿರೋಧಿ ನಡೆಯಾಗಿದೆ ಎಂದಿದ್ದಾರೆ. ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಮುಸಲ್ಮಾನರನ್ನು ಓಲೈಸಲು ಸಂವಿಧಾನವನ್ನೇ ತಿರುಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದಕ್ಕೆ ಕರ್ನಾಟಕದಲ್ಲಿ 4% ಮೀಸಲಾತಿಯನ್ನು ಸರ್ಕಾರಿ ಗುತ್ತಿಗೆಗಳಿಗೆ ಸಂಬಂಧಿಸಿದ ಹಾಗೆ ಮುಸಲ್ಮಾನರಿಗೆ ನೀಡಿರುವುದೇ ಪ್ರತ್ಯಕ್ಷ ಸಾಕ್ಷಿ ಎಂದಿದ್ದಾರೆ. ಕರ್ನಾಟಕ ಕಾಂಗ್ರೆಸ್‌ನ ಈ ನೀತಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನಕ್ಕೆ ಮಾಡಿದ ಅವಮಾನ. ಒಂದು ಕಡೆ ಸಂವಿಧಾನ ಅಪಾಯದಲ್ಲಿದೆ, ಅದನ್ನು ನಾವು ರಕ್ಷಣೆ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಇನ್ನೊಂದು ಕಡೆಯಲ್ಲಿ ಧರ್ಮಾಧಾರಿತ ಮೀಸಲಾತಿಯನ್ನು ಮೂಲಕ ಸಂವಿಧಾನಕ್ಕೆ ಅವಮಾನಿಸುತ್ತಿದ್ದಾರೆ. ಕೈ ನಾಯಕರ ಇಂತಹ ದ್ವಂದ್ವ ನೀತಿ ಖಂಡನೀಯ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಮೇಲೆ ನಿಜವಾದ ಕಾಳಜಿ, ಅಭಿಮಾನ ಇದ್ದರೆ ಮುಸ್ಲಿಂ ಮೀಸಲಾತಿಯನ್ನು ತಕ್ಷಣವೇ ಹಿಂಪಡೆಯಲಿ ಎಂದು ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.