ಚಿಕ್ಕಮಗಳೂರು: ಗಂಡನ ಮನೆಯವರು ವರದಕ್ಷಿಣೆಗಾಗಿ ನೀಡುತ್ತಿದ್ದ ಕಿರುಕುಳಕ್ಕೆ ಹೆಂಡತಿಯ ಜೀವವೇ ಬಲಿಯಾದ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಮತಾ ಎಂದು ಗುರುತಿಸಲಾಗಿದೆ. ಮಮತಾ ಅವರಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು ಈ ಸಂದರ್ಭದಲ್ಲಿ 110 ಗ್ರಾಂ ಚಿನ್ನ ಸಹ ನೀಡಿದ್ದರು. ಆದರೆ ವಿವಾಹ ನಂತರದಲ್ಲಿ ತವರು ಮನೆಯಿಂದ ಹೆಚ್ಚಿನ ಹಣ ತರುವಂತೆ ಮಮತಾ ಅವರಿಗೆ ಗಂಡನ ಮನೆಯಲ್ಲಿ ಕಿರುಕುಳ ಆರಂಭವಾಗಿದೆ. ಗಂಡನ ಮನೆಯಲ್ಲಿ ಮಾನಸಿಕ - ದೈಹಿಕ ಹಿಂಸೆ ತಾಳಲಾರದೆ ಮಮತಾ ತವರು ಮನೆಗೆ ಬಂದಿದ್ದರು. ಈ ನಡುವೆ ಎರಡೂ ಕುಟುಂಬದ ನಡುವೆ ರಾಜಿ ಪಂಚಾಯತಿ ನಡೆದು ಮಮತಾ ಮತ್ತೆ ಗಂಡನ ಮನೆ ಸೇರಿದ್ದರು. ಕಳೆದ ವರ್ಷ ತೋಟದ ನಿರ್ವಹಣೆ ಹೆಸರಲ್ಲಿ ಮಮತಾ ತವರಿನಿಂದ ಪತಿ 50 ಸಾವಿರ ರೂ. ಪಡೆದಿದ್ದ. ಇದಾದ ಬಳಿಕ ಮಮತಾಗೆ ಪಿಡ್ಸ್ ಬಂದಿದೆ ಎಂದು ಹೇಳಿದ ಆಕೆಯ ಪತಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದ. ಈ ವೇಳೆ ಮಮತಾ ಪತಿಯ ಚಿಕ್ಕಪ್ಪ ಆಕೆ ನೇಣು ಹಾಕಿಕೊಳ್ಳಲು ಪ್ರಯತ್ನ ನಡೆಸಿ ಆಸ್ಪತ್ರೆ ಸೇರಿದ್ದಾಗಿ ಹೇಳಿದ್ದರು. ಎರಡು ತಿಂಗಳ ಹಿಂದೆ ಆಕೆಯ ಚಿಕಿತ್ಸೆ ಪೂರ್ಣವಾಗುವ ಮೊದಲೇ ಮಮತಾ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಇದಾದ ಕೆಲವೇ ದಿನದಲ್ಲಿ ಮಮತಾ ಮೃತ ಪಟ್ಟಿದ್ದಾರೆ. ಮಮತಾ ಸಾವಿನಿಂದ ಅನುಮಾನಗೊಂಡಿರುವ ಅವರ ಕುಟುಂಬಸ್ಥರು ಆಕೆಯ ಪತಿ, ಅತ್ತೆ, ಮಾವನ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.