ಬಂಟ್ವಾಳ: ಸರ್ಕಾರಿ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಕಲ್ಲಡ್ಕ ಸಮೀಪ ಪ್ರಯಾಣಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಆರೋಪಿಯನ್ನು ನಾವೂರು ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಯಾನೆ ಮೋನು ಎಂದು ಗುರುತಿಸಲಾಗಿದೆ. ಆರೋಪಿ ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಕುಳಿತಿದ್ದ ವಿದ್ಯಾರ್ಥಿನಿಯ ಮೇಲೆ ಉದ್ದೇಶಪೂರ್ವಕವಾಗಿ ಬಿದ್ದು, ಲೈಂಗಿಕ ಕೀಟಲೆ ನೀಡಿದ್ದಾನೆ. ಈ ಸಂಬಂಧ ಯುವತಿ ಬಸ್ ನಿರ್ವಾಹಕರಿಗೆ ವಿಷಯ ತಿಳಿಸಿದ್ದಾರೆ. ನಿರ್ವಾಹಕ ಆರೋಪಿಗೆ ಮರ್ಯಾದೆಯಿಂದ ಇರುವಂತೆ ಎಚ್ಚರಿಕೆ ಸಹ ನೀಡಿದ್ದರು ಎಂದು ತಿಳಿದು ಬಂದಿದೆ. ಇನ್ನೇನು ತಾನು ಸಿಕ್ಕಿ ಬೀಳುತ್ತೇನೆ ಎಂಬ ಭಯದಿಂದ ಕಲ್ಲಡ್ಕದಲ್ಲಿ ಆರೋಪಿ ಇಳಿದು ಪರಾರಿಯಾಗಲು ನೋಡಿದ್ದು, ಈ ಸಮಯದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಆತನನ್ನು ಹಿಡಿಯುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕರೇ ಈತನನ್ನು ಹಿಡಿದು ಬಂಟ್ವಾಳ ಪೊಲೀಸರಿಗೆ ಒಪ್ಪಿಸಿದ್ದಾರೆ.