ಬೆಳಗಾವಿ: ನಿರಂತರವಾಗಿ ಆನ್‌ಲೈನ್ ವಂಚಕರಿಂದ ಶೋಷಣೆಗೆ ಒಳಗಾಗಿ ಲಕ್ಷಾಂತರ ರೂ. ಕಳೆದುಕೊಂಡ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ಡಿಯಾಗೋ ಸಂತಾನ ನಜ್ರೆತ್ ಮತ್ತವರ ಪತ್ನಿ ಫ್ಲೆವಿಯಾ ಡಿಯಾಗೊ ನೆಜ್ರತ್ ಆತ್ಮಹತ್ಯೆಗೆ ಶರಣಾದವರು. ಕೆಲ ಸಮಯದಿಂದ ಅನಿಲ್ ಯಾದವ್ ಡಿಯಾಗೋ ಮೊಬೈಲ್‌ಗೆ ಕರೆ ಮಾಡಿ ಅಸಭ್ಯ ಸಂದೇಶಗಳು ನಿಮ್ಮ ಮೊಬೈಲ್ ನಿಂದ ಬರುತ್ತಿವೆ. ಈ ಸಂಬಂಧ ಸೈಬರ್ ಅಪರಾಧ ವಿಂಗ್‌ನಲ್ಲಿ ದೂರು ನೀಡಿದ್ದಾಗಿ ತಿಳಿಸಿದ್ದಾನೆ. ಆ ಬಳಿಕ ಸುಮಿತ ಬಿಸ್ರಾ ಎಂಬಾತ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿಸುವ ಬೆದರಿಕೆ ಒಡ್ಡಿದ್ದ. ಈ ವೃದ್ಧ ದಂಪತಿಯ ನಗ್ನ ವಿಡಿಯೋ ತಮ್ಮ ಬಳಿ ಇರುವುದಾಗಿಯೂ ಈ ಇಬ್ಬರು ಆರೋಪಿಗಳು ಬ್ಲಾಕ್‌ಮೇಲ್ ಮಾಡುತ್ತಿದ್ದರು. ಹಾಗೆಯೇ ಕಾನೂನು ಕ್ರಮದ ನೆಪದಲ್ಲಿ ಡಿಯಾಗೋ ಅಕೌಂಟ್‌ನಿಂದ ಲಕ್ಷಾಂತರ ರೂ. ದೋಚಿದ್ದರು. ನಿರಂತರವಾಗಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಫ್ಲೆವಿಯಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡಿಯಾಗೋ ನೇಣು ಹಾಕಿಕೊಳ್ಳಲು ಪ್ರಯತ್ನಿಸಿ ಅದು ವಿಫಲವಾದಾಗ ಕತ್ತು ಕೊಯ್ದು, ಬಳಿಕ ನೀರಿನ ತೊಟ್ಟಿಗೆ ಮುಖ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದ್ದು, ನಂದಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.