ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಮನರೇಗಾ ಯೋಜನೆಯಡಿ ನೀಡುವ ಅನುದಾನವನ್ನು ಕೆಲವು ರಾಜ್ಯಗಳು ದುರುಪಯೋಗ ಮಾಡಿಕೊಳ್ಳುವುದಾಗಿ ತಿಳಿದು ಬಂದಿದೆ. ಕರ್ನಾಟಕಕ್ಕೆ ಈ ಯೋಜನೆಯಡಿಯಲ್ಲಿ 5557.32 ಕೋಟಿ ರೂ. ಅನುದಾನ ನೀಡಲಾಗಿದ್ದು, ಈ ಪೈಕಿ 41.58 ಕೋಟಿ ರೂ. ದುರುಪಯೋಗವಾಗಿದೆ. ಅದರಲ್ಲಿ 3.38 ಕೋಟಿ ರೂ. ಗಳನ್ನು ಕೇಂದ್ರದ ಸಚಿವಾಲಯ ಮರಳಿ ಪಡೆದಿದೆ. ದೇಶದಲ್ಲಿ 2024-25 ರ ಆರ್ಥಿಕ ವರ್ಷದಲ್ಲಿ ಮನರೇಗಾ ಯೋಜನೆಯ ಅನುದಾನದಲ್ಲಿ 193.67 ಕೋಟಿ ರೂ. ದುರ್ಬಳಕೆಯಾಗಿದ್ದು, ಅದರಲ್ಲಿ ಕೇವಲ 10.29 ಕೋಟಿ ರೂ. ಗಳನ್ನು ಕೇಂದ್ರ ಮರಳಿ ಪಡೆದಿದೆ. ಇನ್ನು ಈ ಯೋಜನೆಯಡಿಯಲ್ಲಿ ಕಳಪೆ, ಅಸಮರ್ಪಕ ಕಾಮಗಾರಿ ಮೊದಲಾದ ಲೋಪಗಳಿಗೆ ಸಂಬಂಧಿಸಿದ ಹಾಗೆ 1,49,000 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 15,854 ಪ್ರಕರಣಗಳನ್ನು ಪರಿಹರಿಸಲಾಗಿದೆ. ಕೇಂದ್ರ ಸರ್ಕಾರದ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಬಿಹಾರ ಸೇರಿದಂತೆ ಹೆಚ್ಚಿನ ರಾಜ್ಯಗಳು ದುರ್ಬಳಕೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಅನುದಾನ ನೀಡುವುದನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ.