ಮಂಗಳೂರು: ಮನೆಯ ಲಾಕರಿನಲ್ಲಿ ಇರಿಸಲಾಗಿದ್ದ ಸುಮಾರು ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿದ ಘಟನೆ ಬಜ್ಪೆಯ ಪೆರ್ಮುದೆಯಲ್ಲಿ ನಡೆದಿದೆ. ಕುವೈಟ್‌ನಲ್ಲಿ ಉದ್ಯೋಗಿಯಾಗಿರುವ ಜೋಸೆಫ್ ಪಿಂಟೋ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯನ್ನು ನೋಡಿಕೊಳ್ಳುತ್ತಿದ್ದ ಕೇರಳ ಮೂಲದ ದಂಪತಿ ಈ ಸಂಬಂಧ ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೋಸೆಫ್ ಪಿಂಟೋ ಕುಟುಂಬ ಕುವೈಟ್‌ನಲ್ಲಿ ಉದ್ಯೋಗದಲ್ಲಿದ್ದು, ವರ್ಷಕ್ಕೊಂದು ಬಾರಿ ಊರಿಗೆ ಬಂದು ಹೋಗುತ್ತಿದ್ದರು. ಮನೆಯ ಲಾಕರಿನಲ್ಲಿ ಇಡಲಾಗಿದ್ದ ಚಿನ್ನ ಕಳವಾಗಿರುವ ವಿಚಾರ ಮಂಗಳವಾರ ಮನೆ ನೋಡಿಕೊಳ್ಳುತ್ತಿದ್ದ ದಂಪತಿಯ ಗಮನಕ್ಕೆ ಬಂದಿದ್ದು, ಅವರು ಪೊಲೀಸರಿಗೆ ದೂರು ನೀಡಿರುವುದಾಗಿದೆ. ಮನೆಯಲ್ಲಿ ಆರು ನಾಯಿಗಳು, 12 ಸಿಸಿ ಕೆಮರಾಗಳಿವೆ. ಆದರೂ ಕಳ್ಳತನವಾಗಿದೆ. ಮನೆಗೆ ಕಳ್ಳರು ಬಂದಿರುವ ಬಗ್ಗೆ ಮಾತ್ರ ಯಾವುದರಲ್ಲೂ ದಾಖಲಾಗಿಲ್ಲ. ಹಾಗಾಗಿ ಕೇರಳ ಮೂಲದ ದಂಪತಿ ಮೇಲೆಯೇ ಅನುಮಾನಗಳು ಹುಟ್ಟಿಕೊಂಡಿವೆ. ಮನೆಯ ಯಜಮಾನ ಜೋಸೆಫ್ ಪಿಂಟೋ ಅವರ ಸೂಚನೆಯಂತೆ ಕೇಸು ನೀಡಲಾಗಿದೆ.