ಶಿವಮೊಗ್ಗ: ಈದ್ಗಾ ಮೈದಾನದ ವಿವಾದ ಮತ್ತೆ ಸುದ್ದಿಯಾಗಿದ್ದು, ಇಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ವಿವಾದಿತ ಈದ್ಗಾ ಮೈದಾನಕ್ಕೆ ರಂಜಾನ್ ಬಳಿಕ ಬೇಲಿ ಹಾಕಲಾಗಿದ್ದು, ಇದನ್ನು ಖಂಡಿಸಿ ಹಿಂದೂ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈಗಾಗಲೇ ಹಾಕಲಾದ ಬೇಲಿಯನ್ನು ತೆರವು ಮಾಡಬೇಕು ಎಂದು ಸ್ಥಳದಲ್ಲೇ ಕುಳಿತು ಧರಣಿ ಮಾಡಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಕಬಳಿಸುತ್ತಿರುವ ಗುಂಡಾಗಳು ಎಂದು ಘೋಷಣೆ ಕೂಗಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬೇಲಿ ತೆರವು ಮಾಡುವ ವರೆಗೆ ಸ್ಥಳದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಪ್ರತಿಭಟನಾಕಾರರು ಎಂದು ಎಚ್ಚರಿಕೆ ನೀಡಿದ್ದಾರೆ. ಬಳಿಕ ಸಂಜೆ 7.30 ರೊಳಗಾಗಿ ಬೇಲಿ ತೆರವು ಮಾಡುವುದಕ್ಕೆ ವ್ಯವಸ್ಥೆ ಮಾಡುವುದಾಗಿ ಪೊಲೀಸರು ಹೇಳಿದ್ದು, ಆ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಈದ್ಗಾ ಮೈದಾನದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.