ಚಿಕ್ಕಮಗಳೂರು: ಗುಂಡು ಹಾರಿಸಿ ತನ್ನ ಮಗು, ಅತ್ತೆ ಮತ್ತು ನಾದಿನಿಯನ್ನು ಕೊಂದು ವ್ಯಕ್ತಿಯೊಬ್ಬ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಗಲು ಗ್ರಾಮದಲ್ಲಿ ನಡೆದಿದೆ. ಬಾಳೆಹೊನ್ನೂರಿನ ಖಾಸಗಿ ಶಾಲೆಯೊಂದರಲ್ಲಿ ಚಾಲಕನಾಗಿದ್ದ ರತ್ನಾಕರ ಗೌಡ ಎಂಬಾತ ಮೂವರನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಎರಡು ವರ್ಷಗಳ ಹಿಂದೆ ಆತನ ಪತ್ನಿ ಬಿಟ್ಟು ಹೋಗಿದ್ದು, ಮಗುವನ್ನು ಸಹ ರತ್ನಾಕರ ಗೌಡನೇ ನೋಡಿಕೊಳ್ಳುತ್ತಿದ್ದ. ನಿನ್ನೆ ರಾತ್ರಿ ಮಗಳ ನೋವಿನ ಮಾತುಗಳಿಂದ ನೊಂದು ತನ್ನ ಅತ್ತೆ ಜ್ಯೋತಿ, ನಾದಿನಿ ಸಿಂಧು ಮತ್ತು ತನ್ನ 7 ವರ್ಷದ ಮಗುವನ್ನು ಗುಂಡಿಕ್ಕಿ ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ತನ್ನ ಮನದ ನೋವನ್ನು ವಿಡಿಯೋ ಮಾಡಿದ್ದು, ತನ್ನ ಮಗಳ ಶಾಲೆಯಲ್ಲಿ ಆಕೆಯ ಫ್ರೆಂಡ್ಸ್ ನಿನ್ನ ಅಮ್ಮ ಎಲ್ಲಿ ಎಂದು ಕೇಳುತ್ತಾರೆ. ನನ್ನ ಮಗು ಅಮ್ಮನ ಫೋಟೋ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ತೋರಿಸಿದ್ದಾಳೆ. ಹೆಂಡತಿ ತನಗೆ ಮೋಸ ಮಾಡಿ ಎರಡು ವರ್ಷಗಳ ಹಿಂದೆ ಮಗುವನ್ನೂ ತೊರೆದು ಹೋಗಿದ್ದಾಳೆ. ನನ್ನ ಮಗಳ ನೋವು ಕಾಣಲಾಗಿದೆ ಈ ಕೃತ್ಯ ಎಸಗಿದ್ದಾಗಿ ಹೇಳಿಕೊಂಡಿದ್ದಾನೆ. ಈ ಘಟನೆಯಲ್ಲಿ ನಾದಿನಿ ಸಿಂಧುವಿನ ಗಂಡ ಅವಿನಾಶ್ ಕಾಲಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.