ಬೆಳ್ತಂಗಡಿ: ಬೆಳಾಲಿನ ಕಾಡಿನಲ್ಲಿ ಬಿಟ್ಟು ಹೋಗಿದ್ದ ನಾಲ್ಕು ತಿಂಗಳ ಹೆಣ್ಣು ಮಗುವಿನ ಪೋಷಕರನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಮಗು ಸಾರ್ವಜನಿಕರಿಗೆ ಕಾಡಿನಲ್ಲಿ ಸಿಕ್ಕಿದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದು, ಅದರ ಪೋಷಕರ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು. ಖಚಿತ ಮಾಹಿತಿಗಳ ಮೇಲೆ ಸದ್ಯ ಪೊಲೀಸರು ಮಗುವಿನ ತಂದೆ ರಂಜಿತ್ ಗೌಡ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಧರ್ಮಸ್ಥಳ ಠಾಣಾ ಎಸ್.ಐ. ಸಮರ್ಥ ಆರ್. ಗಣಿಗೇರಾ ಮತ್ತು ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮಗುವಿನ ತಂದೆ ಪತ್ತೆಯಾಗಿರುವುದಾಗಿದೆ. ರಂಜಿತ್ ಮತ್ತು ಸುಶ್ಮಿತಾ ಪರಸ್ಪರ ಪ್ರೀತಿಸುತ್ತಿದ್ದು, ಈ ವಿಷಯ ಎರಡು ಮನೆಯವರಿಗೂ ತಿಳಿದಿರಲಿಲ್ಲ. ಈ ನಡುವೆ ಸುಶ್ಮಿತಾ ಗರ್ಭಿಣಿಯಾಗಿದ್ದು ಈ ವಿಚಾರವನ್ನು ಸಹ ಮನೆಯವರಿಂದ ಇಬ್ಬರೂ ಮುಚ್ಚಿಟ್ಟಿದ್ದರು. ಪ್ರೇಮಿಗಳು ಪ್ರತಿ ತಿಂಗಳೂ ಆಸ್ಪತ್ರೆಗೆ ಹೋಗುತ್ತಿದ್ದು, ತಾಯಿ ಕಾರ್ಡ್ ಕಳೆದು ಹೋಗಿದೆ ಎಂದು ಹೇಳಿದ್ದರು. ಮಾರ್ಚ್ 22 ರಂದು ಈ ಹೆಣ್ಣು ಮಗು ಬೆಳಾಲಿನ ಕೊಡೋಳುಕೆರೆ ಕಾಡಿನ ಮಧ್ಯೆ ಪತ್ತೆಯಾಗಿತ್ತು.