ಬೆಂಗಳೂರು: ದುಬೈನಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ರನ್ಯಾ ರಾವ್ ಬಗ್ಗೆ ಸ್ಪೋಟಕ ಮಾಹಿತಿಗಳು ಬಯಲಾಗುತ್ತಲೇ ಇವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪೊಲೀಸರು ಬಂಧಿಸಿದ್ದ ಬಳ್ಳಾರಿಯ ಸಾಹಿಲ್ ವಿಚಾರಣೆಯ ಸಂದರ್ಭದಲ್ಲಿ ಹಲವಾರು ಸಂಗತಿಗಳನ್ನು ಬಾಯ್ಬಿಟ್ಟಿದ್ದು, ರನ್ಯಾ ಕೇವಲ ಮೂರೇ ತಿಂಗಳಲ್ಲಿ ದುಬೈನಿಂದ 49.6 ಕೆಜಿ ಚಿನ್ನ ತಂದಿರುವುದಾಗಿ ತಿಳಿಸಿದ್ದಾನೆ. ಕಳೆದ ನವೆಂಬರ್ ತಿಂಗಳಿನಿಂದಲೇ ರನ್ಯಾ ತನಗೆ ಸುಮಾರು 50 ಕೆಜಿಗಳಷ್ಟು ಚಿನ್ನ ತಂದು ಕೊಟ್ಟಿದ್ದಾಗಿ ಸಾಹಿಲ್ ಡಿಆರ್ಐ ಅಧಿಕಾರಿಗಳ ಮುಂದೆ ಹೇಳಿದ್ದಾನೆ. ಸಾಹಿಲ್ ಕೇವಲ ಈ ಚಿನ್ನವನ್ನು ಮಾರಾಟ ಮಾಡುವ ಕೆಲಸವನ್ನು ಮಾಡಿದ್ದಾಗಿ ಹೇಳಿದ್ದಾನೆ. ಜೊತೆಗೆ ರನ್ಯಾ ರಾವ್ 30 ಕೋಟಿ ರೂ. ಹಣವನ್ನು ಹವಾಲಾ ಮೂಲಕ ದುಬೈಗೆ ಸಾಗಿಸಿದ್ದಾಗಿಯೂ ಮಾಹಿತಿ ನೀಡಿದ್ದಾನೆ. ಈ ಎಲ್ಲಾ ಮಾಹಿತಿಗಳನ್ನು ಡಿಆರ್ಐ ಅಧಿಕಾರಗಳು ನ್ಯಾಯಾಲಯಕ್ಕೆ ನೀಡಿದ್ದಾಗಿ ತಿಳಿದು ಬಂದಿದೆ.