ಬೆಂಗಳೂರು: ಪತ್ನಿಯ ಸಾವಿನ ನೋವನ್ನು ಅರಗಿಸಿಕೊಳ್ಳಲಾಗದ ಪತಿ ತನ್ನಿಬ್ಬರು ಮಕ್ಕಳನ್ನೂ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಉದಯ್ ಮತ್ತು ಅವರ ಮಕ್ಕಳಾದ ಸಿಂಧೂಶ್ರೀ, ಶ್ರೀಜಯ್ ಎಂದು ಗುರುತಿಸಲಾಗಿದೆ. ಉದಯ್ ಮತ್ತು ರಾಣೆಬೆನ್ನೂರಿನ ಹೇಮ ಅವರು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಅನಾರೋಗ್ಯದ ಕಾರಣಕ್ಕೆ ಪತ್ನಿ ಹೇಮಾ ಅವರು ಕಳೆದ 8 ತಿಂಗಳ ಹಿಂದೆ ಮೃತಪಟ್ಟಿದ್ದರು. ಪತ್ನಿಯ ಸಾವಿನ ನೋವಿನಿಂದ ಹೊರಬರಲಾರದ ಉದಯ್ ಮಕ್ಕಳ ಜೊತೆಗೆ ಆಗಾಗ ಪತ್ನಿಯ ಸಮಾಧಿಯ ಬಳಿಗೂ ಹೋಗುತ್ತಿದ್ದರು. ಈಗ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.